ಯರಗೋಳ್ ಯೋಜನೆ: ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

Update: 2019-06-15 10:42 GMT

ಕೋಲಾರ, ಜೂ.14: ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ರೂಪಿಸಿರುವ ಯರಗೋಳು  ಯೋಜನೆಯ ಕುರಿತು ವಿಸ್ತೃತ ಪ್ರಗತಿ ಪರಿಶೀಲನಾ ಸಭೆ ಇತ್ತೀಚೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ರವರ ಅಧ್ಯಕ್ಷತೆಯಲ್ಲಿ ಜರುಗಿತು. 

ಈ ಸಬೆಯಲ್ಲಿ ಸಚಿವರು ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿ, ಹಿಂದಿನ ಸಭೆಯ ಸೂಚನೆಯಂತೆ ಜಲ ಶುದ್ಧೀಕರಣ ಘಟಕ, ಮೂರು ಪಂಪ್ ಹೌಸ್‍ಗಳು, ನೆಲಮಟ್ಟದ 6 ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಗಾರಗಳನ್ನು ನಿರ್ಮಾಣ ಮಾಡಲು ಟೆಂಡರ್ ಕರೆದು, ಕಾರ್ಯಾದೇಶ ಸಹ ನೀಡಲಾಗಿದೆ. ಕಾಮಗಾರಿ ಕೂಡ ಆರಂಭವಾಗಿದೆ. ಈ ಸಂಬಂಧ ದಿನಾಂಕ 16.2.2019 ರಂದು ಕರೆಯಲಾಗಿದ್ದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಅನುಸಾರ ಎಲ್ಲಾ ಅಂಶಗಳನ್ನು ಇದರಲ್ಲಿ ಅಳವಡಿಸಲಾಗಿದೆಯೆಂದು ಸಭೆಯಲ್ಲಿ ತಿಳಿಸಲಾಯಿತು. 

ಕೋಲಾರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ನಾಲ್ಕು ಮೇಲ್ಮಟ್ಟದ ಜಲ ಸಂಗ್ರಹಗಾರಗಳನ್ನು (ಓವರ್ ಹೆಡ್ ಟ್ಯಾಂಕ್), 5 ಪಂಪ್ ಹೌಸ್‍ಗಳು, 11 ಕೆವಿ ಎಕ್ಸ್‍ಪ್ರೆಸ್ ಫೀಡರ್ ಮುಖ್ಯ ಮಾರ್ಗದ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ತುರ್ತು ಟೆಂಡರ್ ಕರೆಯಲು ಸಚಿವರು ಆದೇಶ ನೀಡಿದರು. ಈ ಕಾಮಗಾರಿಗಳು ಡಿಸೆಂಬರ್ ತಿಂಗಳ ಒಳಗೆ ಪೂರ್ಣಗೊಳಿಸಲು ಸೂಚಿಸಿದರು.
  
ಸಭೆಯಲ್ಲಿ ಯೋಜನೆಯ ಬಗ್ಗೆ ಕೂಲಂಕುಷ ಚರ್ಚೆ ನಂತರ ನಾನಾ ಕಾರಣಗಳಿಗಾಗಿ ಈ ಯೋಜನೆಯು ಕುಂಠಿತಗೊಂಡಿದ್ದು, ಈ ಯೋಜನೆಯ ಅನುಮೋದಿತ ಅಂದಾಜು ವೆಚ್ಚ ರೂ.79.92 ಕೋಟಿ ಇದ್ದದ್ದು ಈಗ ರೂ.127.76 ಕೋಟಿಗೆ ಹೆಚ್ಚಳವಾಗಿದೆ. ಈ ಪರಿಷ್ಕೃತ ಮೊತ್ತ ಅನಿವಾರ್ಯವಾಗಿದ್ದು, ಈ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಸರ್ಕಾರ ಹೆಚ್ಚುವರಿ ಮೊತ್ತವನ್ನು ಭರಿಸಬೇಕಾಗುತ್ತದೆ. ಆದ್ದರಿಂದ ಈ ಸಂಬಂಧ ಹೆಚ್ಚುವರಿ ಅನುದಾನಕ್ಕೆ  ಸಂಬಂಧಪಟ್ಟ ಪ್ರಸ್ತಾವನೆಯನ್ನು ಅತ್ಯಂತ ತ್ವರಿತವಾಗಿ ಸಚಿವ ಸಂಪುಟದ ಮುಂದೆ ಅನುಮೋದನೆಗಾಗಿ ಮಂಡಿಸುವಂತೆ ಸಚಿವ ಕೃಷ್ಣ ಬೈರೇಗೌಡ  ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News