6 ತಿಂಗಳಲ್ಲಿ ಮಧ್ಯಂತರ ಚುನಾವಣೆ ಖಚಿತ: ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ

Update: 2019-06-15 12:38 GMT

ಬೆಂಗಳೂರು, ಜೂ.15: ಶಾಸಕ ಎಸ್.ಟಿ.ಸೋಮಶೇಖರ್ 6-7 ತಿಂಗಳಲ್ಲಿ ಮೈತ್ರಿ ಸರಕಾರವನ್ನು ಬೀಳಿಸುತ್ತಾರೆ. ಹೀಗಾಗಿ ಮಧ್ಯಂತರ ಚುನಾವಣೆ ಬರುವುದು ಖಚಿತವೆಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಯಿಂದ ಹೊರ ಬರಬೇಕೆಂಬ ತುಡಿತದಲ್ಲಿರುವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಕೆಲವು ನಾಯಕರು ಸರಕಾರವನ್ನು ಉರುಳಿಸುತ್ತಾರೆ ಎಂದರು.

ಕಾಂಗ್ರೆಸ್ ಮತ್ತು ಕೆಪಿಜೆಪಿ ಪಕ್ಷಗಳ ವಿಲೀನ ಕಾನೂನಾತ್ಮಕವಾಗಿ ನಡೆದಿಲ್ಲ. ಶಂಕರ್ ಕೆಪಿಜೆಪಿ ಸಂಸ್ಥಾಪಕ ಅಲ್ಲ. ರಾಣೆಬೆನ್ನೂರಿನಲ್ಲಿ ಶಂಕರ್ ಕಾಂಗ್ರೆಸ್ ನಾಯಕನಲ್ಲ. ಕಾಂಗ್ರೆಸ್‌ಗೆ ಅನಿವಾರ್ಯ ಇದ್ದಿದ್ದರಿಂದ ಸಚಿವನನ್ನಾಗಿ ಮಾಡಲಾಗಿದೆಯಷ್ಟೆ ಎಂದು ಅವರು ಹೇಳಿದರು.

2018 ರಲ್ಲೂ ನನಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡಿದರು. ರಾಹುಲ್ ಗಾಂಧಿ ಭೇಟಿಯಾಗಿ ನೇರವಾಗಿ ಟಿಕೆಟ್ ಪಡೆದುಕೊಂಡೆ. ಸಿದ್ದರಾಮಯ್ಯ ಆ ದಿನಗಳಲ್ಲಿ ಶಂಕರ್ ಪರವಾಗಿ ಇದ್ದರು. ಆದರೆ, ಇವತ್ತು ನಮ್ಮ ಪರವಾಗಿ ಇದ್ದಾರೆ. ನನಗೆ ಟಿಕೆಟ್ ಕೊಡದಿದ್ದರು, ನನ್ನ ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಲಿ ಎಂದು ಅವರು ಒತ್ತಾಯಿಸಿದರು.

ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ. ಯಾವತ್ತಿಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಕೇವಲ ಅಧಿಕಾರಕ್ಕಾಗಿ ಬೇರೆ ಪಕ್ಷಗಳಿಗೆ ಹೋಗುವ ಮನಸ್ಥಿತಿ ನನಗಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಮತ್ತಷ್ಟು ಸಕ್ರಿಯವಾಗುತ್ತೇನೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News