ನಿರ್ಲಕ್ಷಕ್ಕೆ ಒಳಗಾದವರನ್ನು ನೋಯಿಸಬೇಡಿ: ಸಂಸದೆ ಶೋಭಾಗೆ ಸಿದ್ದರಾಮಯ್ಯ ಸಲಹೆ

Update: 2019-06-15 13:36 GMT

ಬೆಂಗಳೂರು, ಜೂ. 15: ‘ಸಮಾಜದಲ್ಲಿ ಈಗಾಗಲೇ ನಿರ್ಲಕ್ಷಕ್ಕೆ ಒಳಗಾಗಿರುವ ಸಮುದಾಯವನ್ನು ಅಸಾಂವಿಧಾನಿಕ ಮಾತುಗಳ ಮೂಲಕ ನೋಯಿಸಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಲಹೆ ಮಾಡಿದ್ದಾರೆ.

ಬಳ್ಳಾರಿಯ ಜಿಂದಾಲ್ ಕಂಪೆನಿಗೆ ಭೂಮಿ ನೀಡುವ ಸರಕಾರದ ನಿರ್ಧಾರದ ವಿರುದ್ಧ ಹಮ್ಮಿಕೊಂಡಿರುವ ಬಿಜೆಪಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಸಂಬಂಧ ಟ್ವಿಟ್ಟರ್‌ನಲ್ಲಿ ಆಕ್ಷೇಪಾರ್ಹ ಪದ ಬಳಸಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಕುಮಾರಿ ಶೋಭಾ ಕರಂದ್ಲಾಜೆ ಅವರೆ, ವಾಕ್ಚಾತುರ್ಯವನ್ನು ಪ್ರದರ್ಶಿಸುವುದಷ್ಟೇ ನಿಮ್ಮ ಉದ್ದೇಶವಾಗಿದ್ದರೆ ‘ಮೈತ್ರಿ’ ಎಂಬ ಪದ ಬಳಸಬಹುದಿತ್ತು. ಬೇಸರಗೊಳ್ಳಬೇಡಿ, ಸಮಾಜದಲ್ಲಿ ಈಗಾಗಲೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವನ್ನು ಅಸಾಂವಿಧಾನಿಕ ಮಾತುಗಳ ಮೂಲಕ ನೋಯಿಸಬೇಡಿ’ ಎಂದು ಟ್ವಿಟ್ಟರ್ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಆಕ್ಷೇಪಾರ್ಹ ಹೇಳಿಕೆಗಳಿಗೂ ಸಂಸದೆ ಶೋಭಾ ಕರಂದ್ಲಾಜೆಗೂ ಬಿಡದ ನಂಟು. ಈ ಹಿಂದೆ ‘ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗದಿದ್ದರೆ ಸಿದ್ದರಾಮಯ್ಯ ಬಳೆ ತೊಟ್ಟುಕೊಳ್ಳಲಿ’ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಓರ್ವ ಹೆಣ್ಣಾಗಿ ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳು ಹೇಳಿಕೆ ಸರಿಯಲ್ಲ’ ಎಂದು ಟ್ವಿಟ್ಟರ್ ಮೂಲಕವೇ ಆಕ್ಷೇಪಿಸಿದುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News