ಮಸಗಲಿ ಅರಣ್ಯ ವ್ಯಾಪ್ತಿಯ ಸಂತ್ರಸ್ಥರಿಗೆ ಅವೈಜ್ಞಾನಿಕ ಪರಿಹಾರ: ಸಚಿನ್ ಮೀಗಾ ಆರೋಪ

Update: 2019-06-15 13:41 GMT

ಚಿಕ್ಕಮಗಳೂರು, ಜೂ.15: ಜಿಲ್ಲೆಯ ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಒಕ್ಕಲೇಳಬೇಕಾಗಿರುವ 211 ಸಂತ್ರಸ್ಥ ಕುಟುಂಬಗಳಿಗೆ ಜಿಲ್ಲಾಡಳಿತ ಅವೈಜ್ಞಾನಿಕ ಪರಿಹಾರ ನೀಡಿ ಒಕ್ಕಲೆಬ್ಬಿಸಲು ಮುಂದಾಗಿದೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದು, ಇಲ್ಲಿನ 211 ಕುಟುಂಬಗಳಿಗೂ ಸೂಕ್ತ ಪರಿಹಾರಧನದೊಂದಿಗೆ ಭೂಮಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಆವತಿ ಹೋಬಳಿಗೆ ಸೇರಿರುವ ಮಸಗಲಿ ಮೀಸಲು ಆರಣ್ಯ ವ್ಯಾಪ್ತಿಯಲ್ಲಿ ಮಸಗಲಿ, ಕರಗೂರು, ಬೆರಣಗೋಡು, ಬ್ಯಾರವಳ್ಳಿ, ಹೊಲದಗದ್ದೆ ಹಾಗೂ ಜಾಗರ ಹೋಬಳಿ ವ್ಯಾಪ್ತಿಯ ಶಿರವಾಸೆಯ ಹಡ್ಲುಗದ್ದೆ ಕಾಲನಿಯ ನಿವಾಸಿಗಳು ಅನಾದಿಕಾಲದಿಂದಲೂ ವಾಸವಿದ್ದು, ಜೀವನಕ್ಕಾಗಿ ಅಲ್ಪಸ್ವಲ್ಪ ಜಮೀನು ಹೊಂದಿದ್ದಾರೆ. ಈ ಗ್ರಾಮಗಳನ್ನು ಸರಕಾರ ನ್ಯಾಯಾಲಯದ ಆದೇಶದ ಮೇರೆಗೆ ಮಸಗಲಿ ಮೀಸಲು ಅರಣ್ಯಕ್ಕೆ ಸೇರಿಸಿರುವುದರಿಂದ ಅರಣ್ಯಾಧಿಕಾರಿಗಳು, ನಿವಾಸಿಗಳು ಒಕ್ಕಲೆಬ್ಬಿಸಲು ಸಿದ್ಧತೆ ನಡೆಸಿದ್ದಾರೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿ 66 ಸಂತ್ರಸ್ಥರ 1002 ಎಕರೆ ಭೂಮಿಯನ್ನು ಜಿಲ್ಲಾಡಳಿತ ಉಳಿಸಿಕೊಟ್ಟಿದ್ದು, 211 ಕುಟುಂಬಗಳಿಗೆ ಅವೈಜ್ಞಾನಿಕ ಪರಿಹಾರ ನೀಡಿ ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಸಚಿನ್ ಮೀಗಾ ಮನವಿಯಲ್ಲಿ ಆರೋಪಿಸಿದ್ದಾರೆ.

ಮೀಸಲು ಆರಣ್ಯ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ 66 ಸಂತ್ರಸ್ಥರಿಗೆ 1002 ಎಕರೆ ಜಮೀನನ್ನು ಉಳಿಸಿಕೊಟ್ಟಿದೆ. ಆದರೆ 211 ಕುಟುಂಬಗಳ ಸಂತ್ರಸ್ಥರ ಪೈಕಿ ಅರಣ್ಯ ವ್ಯಾಪ್ತಿಯಲ್ಲಿ ಮನೆ ಕಳೆದುಕೊಳ್ಳುವವರಿಗೆ 2.50 ಲಕ್ಷ ರೂ, ಜಮೀನು ಕಳೆದುಕೊಳ್ಳುವವರಿಗೆ 5 ಲಕ್ಷ ರೂ. ಹಾಗೂ ಮನೆ ಜಮೀನು ಕಳೆದು ಕೊಳ್ಳುವವರಿಗೆ 7.50 ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಈ ಅರಣ್ಯ ವ್ಯಾಪ್ತಿಯಲ್ಲಿ ಸಂತ್ರಸ್ಥರು 1 ಎಕರೆಯಿಂದ 10 ಎಕರೆ ಜಮೀನನ್ನು ಹೊಂದಿದ್ದು, ಈ ಜಮೀನು 2 ರಿಂದ 30 ಲಕ್ಷ ರೂ. ಮೌಲ್ಯದ್ದಾಗಿದೆ. ಅಲ್ಲದೇ ಸಂತ್ರಸ್ಥರ ಪೈಕಿ ಒಂದೇ ಮನೆಯಲ್ಲಿ ಎರಡರಿಂದ ಮೂರು ಕುಟುಂಬಗಳಿದ್ದು, ಜಿಲ್ಲಾಡಳಿತ ಇಂತಹ ಸಂತ್ರಸ್ಥ ಕುಟುಂಬಗಳಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ, 1 ಎಕರೆ ಇದ್ದವರಿಗೆ ನೀಡುವ ಪರಿಹಾರವನ್ನೇ 10 ಎಕರೆ ಇದ್ದವರಿಗೂ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿರುವ ಅವರು, 66 ಕುಟುಂಬಗಳಿಗೆ ಜಿಲ್ಲಾಡಳಿತ 1002 ಎಕರೆ ಭೂಮಿ ಉಳಿಸಿಕೊಟ್ಟಿರುವಂತೆ 211 ಕುಟುಂಬಗಳಿಗೂ 347 ಎಕರೆ ಜಮೀನನ್ನು ಅಲ್ಲೇ ಉಳಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ಸಂತ್ರಸ್ಥರಿಗೆ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಅವೈಜ್ಞಾನಿ ಪರಿಹಾರವನ್ನು ಪರಿಶೀಲಿಸಿ ಜಮೀನಿನ ಮೌಲ್ಯಕ್ಕನುಗುಣವಾಗಿ ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿರುವ ಅವರು, ತಾಲೂಕಿನ ವಿವಿಧೆಡೆ ಖಾಲಿ ಇರುವ ಸರಕಾರಿ ಜಾಗವನ್ನು ಗುರುತಿಸಿ ಸಂತ್ರಸ್ಥರಿಗೆ ಭೂಮಿ ಹಂಚಿಕೆ ಮಾಡಬೇಕೆಂದು ಸಿಎಂ ಅವರನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News