ವಂಚಕರ ಆಸ್ತಿ ಮುಟ್ಟುಗೋಲು: ತಮಿಳುನಾಡು ಮಾದರಿಯಲ್ಲಿ ಕಾನೂನು- ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-06-15 14:09 GMT

ಬೆಂಗಳೂರು, ಜೂ.15: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣದ ಕುರಿತು ತನಿಖೆ ನಡೆಸಲು ಸರಕಾರ ಎಸ್‌ಐಟಿ ರಚನೆ ಮಾಡಿದೆ. ಅಲ್ಲದೇ, ಈ ಸಂಸ್ಥೆಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಹಕಾರ ಪಡೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಎಂ.ಬಿ.ಪಾಟೀಲ್ ತಿಳಿಸಿದರು. 

ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಎಲ್ಲೇ ಇದ್ದರೂ ಆತನನ್ನು ಬಂಧಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಈ ಪ್ರಕರಣದ ಕುರಿತು ನಿನ್ನೆ ಉನ್ನತಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇನೆ. ಐಎಂಎ ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳನ್ನು ವಶಕ್ಕೆ ಪಡೆದು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ತಮಿಳುನಾಡಿನಲ್ಲಿ ಈ ರೀತಿಯ ವಂಚನೆ ಆದಾಗ ಸಂಬಂಧಪಟ್ಟವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಅಲ್ಲಿನ ಪೊಲೀಸರಿಗೆ ನೀಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಕಾನೂನು ತರಲು ಮುಂದಾಗಿದ್ದು, ಈ ಜವಾಬ್ದಾರಿಯನ್ನು ಸರಕಾರದ ಮುಖ್ಯ ಕಾರ್ಯದರ್ಶಿಗೆ ವಹಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಹಣಕಾಸು ವಿಚಾರಗಳು ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ವಂಚನೆಗಳು ಆಗಿ ದೂರು ದಾಖಲಾಗಿ, ಎಫ್‌ಐಆರ್ ಆದ ಬಳಿಕ ಅದು ನಮ್ಮ ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇಂತಹ ಕಂಪೆನಿಗಳು, ವಿವಿಧ ಇಲಾಖೆಗಳ ಮೂಲಕ ಅನುಮತಿ ಪಡೆದು ವ್ಯವಹಾರವನ್ನು ಪ್ರಾರಂಭಿಸುತ್ತವೆ ಎಂದು ಅವರು ತಿಳಿಸಿದರು.

ಪೊಲೀಸ್, ಕಂದಾಯ, ಸಹಕಾರ, ಕಾನೂನು, ಆರ್ಥಿಕ, ರಿಜಿಸ್ಟ್ರಾರ್ ಆಫ್ ಕಂಪನೀಸ್, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಬಿಬಿಎಂಪಿ ಆಯುಕ್ತರು ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳ ಜೊತೆ ಮುಖ್ಯ ಕಾರ್ಯದರ್ಶಿ ಕಾನೂನು ಸ್ವರೂಪದ ಕುರಿತು ಚರ್ಚೆ ಮಾಡಲಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಈ ಕಾನೂನು ಜಾರಿಗೆ ತರಲು ಉದ್ದೇಶಿಸಿದ್ದೇವೆ. ಎಲ್ಲ ಇಲಾಖೆಗಳು ಸೇರಿ ಈ ಪ್ರಯತ್ನ ಮಾಡುತ್ತೇವೆ. ಐಎಂಎ ಪ್ರಕರಣದ ಕುರಿತು ಎಸ್‌ಐಟಿ ತನ್ನ ತನಿಖೆ ಮುಂದುವರೆಸಿದ್ದು, ಇನ್ನು ಮುಂದೆ ಯಾವುದೇ ಹೇಳಿಕೆಗಳನ್ನು ನೀಡಲ್ಲ. ಎಸ್‌ಐಟಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದು, ನಮ್ಮಿಂದ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡುತ್ತೇವೆ ಎಂದು ಅವರು ತಿಳಿಸಿದರು.

ಜಿಂದಾಲ್ ಸಂಸ್ಥೆಗೆ ಭೂಮಿ: ಕೈಗಾರಿಕಾ ನೀತಿ ನಿಯಮಗಳ ಆಧಾರದ ಮೇಲೆ ಜಿಂದಾಲ್ ಸಂಸ್ಥೆಗೆ ದರ ನಿಗದಿ ಮಾಡಿ ಭೂಮಿ ಹಂಚಿಕೆ ಮಾಡಲಾಗುತ್ತಿದೆ. ಕೈಗಾರಿಕೆ ಉದ್ದೇಶಕ್ಕೆ ನೀಡುವ ಭೂಮಿಗೆ ಶರತ್ತುಗಳನ್ನು ವಿಧಿಸಲಾಗಿರುತ್ತದೆ. 10 ವರ್ಷ ಭೂಮಿ ಮೇಲೆ ನಿಗಾ ಇರಿಸಲಾಗುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ವಿಚಾರದ ಕುರಿತು ಚರ್ಚಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಬಿಜೆಪಿಯವರಾಗಲಿ, ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಆಗಲಿ ಯಾರೂ ಕೂಡ ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News