ವೈದ್ಯರ ರಕ್ಷಣೆಗೆ ನಿರ್ದಿಷ್ಟ ಕಾನೂನುಗಳನ್ನು ತರುವಂತೆ ಎಲ್ಲ ಮುಖ್ಯಮಂತ್ರಿಗಳಿಗೆ ಕೇಂದ್ರದ ಸೂಚನೆ

Update: 2019-06-15 16:19 GMT

 ಹೊಸದಿಲ್ಲಿ,ಜೂ.15: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರು ಶನಿವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು,ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶ ನೀಡಿದ್ದಾರೆ. ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ರಕ್ಷಣೆಗಾಗಿ ನಿರ್ದಿಷ್ಟ ಕಾನೂನುಗಳನ್ನು ರೂಪಿಸುವಂತೆಯೂ ಅವರು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.

ತನ್ಮಧ್ಯೆ,ರಾಜ್ಯದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸುವಂತೆ ಶನಿವಾರ ಸೂಚಿಸುವ ಮೂಲಕ ಕೇಂದ್ರವೂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.

 ಭಾರತೀಯ ವೈದ್ಯಕೀಯ ಸಂಘವು ಶುಕ್ರವಾರದಿಂದ ದೇಶಾದ್ಯಂತ ನಾಲ್ಕು ದಿನಗಳ ಪ್ರತಿಭಟನೆಯನ್ನು ಆರಂಭಿಸಿರುವ ಹಾಗೂ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಹಿಂಸಾಚಾರವನ್ನು ತಡೆಯಲು ಕೇಂದ್ರೀಯ ಕಾನೂನೊಂದನ್ನು ಜಾರಿಗೊಳಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಪತ್ರಮುಖೇನ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಹರ್ಷವರ್ಧನರ ನಿರ್ದೇಶ ಹೊರಬಿದ್ದಿದೆ.

ವೈದ್ಯರ ವಿರುದ್ಧ ಹಿಂಚಾಚಾರದ ಇತ್ತೀಚಿನ ಘಟನೆಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಹರ್ಷವರ್ಧನ ಅವರು, ದೇಶದ ವಿವಿಧ ಭಾಗಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆದಿರುವ ಘಟನೆಗಳು ವರದಿಯಾಗಿದ್ದು,ಇದು ವೈದ್ಯರ ದಿಢೀರ್ ಮುಷ್ಕರಕ್ಕೆ ಕಾರಣವಾಗಿದೆ ಮತ್ತು ವೈದ್ಯಕೀಯ ಸೇವೆಗಳಿಗೆ ತೀವ್ರ ವ್ಯತ್ಯಯವನ್ನುಂಟು ಮಾಡಿದೆ ಎಂದಿದ್ದಾರೆ.

ಐಎಂಎ ಮತ್ತು ದಿಲ್ಲಿ ವೈದ್ಯಕೀಯ ಸಂಘದ ಪ್ರತಿನಿಧಿಗಳೂ ಶನಿವಾರ ಹರ್ಷವರ್ಧನರನ್ನು ಭೇಟಿಯಾಗಿದ್ದರು.

ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ನಿವಾರಿಸುವ ಅಗತ್ಯಕ್ಕೆ ಒತ್ತು ನೀಡಿರುವ ಹರ್ಷವರ್ಧನ,ವೈದ್ಯರು ಮತ್ತು ಆಸ್ಪತ್ರೆಗಳು ಯಾವುದೇ ಹಿಂಸೆಯ ಭೀತಿಯಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಕಾನೂನು ಜಾರಿ ಸಮರ್ಪಕವಾಗಿರಬೇಕು. ವೈದ್ಯರು ಸಮಾಜದ ಪ್ರಮುಖ ಆಧಾರಸ್ಥಂಭವಾಗಿದ್ದಾರೆ ಮತ್ತು ಒತ್ತಡ ಹಾಗೂ ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ ಎಂದು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News