'ಪಶುಭಾಗ್ಯ ಯೋಜನೆ' ದುರ್ಬಳಕೆ ತಡೆಗೆ ಹಸುಗಳಿಗೆ ‘ಚಿಪ್’ ಅಳವಡಿಕೆ: ಸಚಿವ ನಾಡಗೌಡ

Update: 2019-06-15 16:58 GMT

ಬೆಂಗಳೂರು, ಜೂ. 15: ಪಶುಸಂಗೋಪನಾ ಇಲಾಖೆಯ ಆಡಳಿತವನ್ನು ಚುರುಕುಗೊಳಿಸುವ ದೃಷ್ಟಿಯಿಂದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, ಇಲಾಖೆ ವೆಬ್‌ಸೈಟ್ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇಲಾಖೆ ವೈದ್ಯರು, ಸಿಬ್ಬಂದಿ ಹಾಗೂ ಔಷಧಗಳ ಕೊರತೆ ತಪ್ಪಿಸಲು ಆನ್‌ಲೈನ್ ವ್ಯವಸ್ಥೆಯಿಂದ ಅನುಕೂಲವಾಗಲಿದೆ. ಅಲ್ಲದೆ, ಜನರಿಗೆ ಇಲಾಖೆ ಕಾರ್ಯವೈಖರಿಯ ಮಾಹಿತಿ ಸಿಗಲಿದೆ ಎಂದರು.

ಹಸುಗಳಿಗೆ ಚಿಪ್: ಪಶುಸಂಗೋಪನಾ ಇಲಾಖೆಯಿಂದ ಹೈನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಎಸ್ಸಿ-ಎಸ್ಟಿ, ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ವಿತರಿಸುವ ಪಶುಭಾಗ್ಯ ಯೋಜನೆ ದುರ್ಬಳಕೆ ತಡೆಗೆ ಹಸುಗಳಿಗೆ ಚಿಪ್ ಅಳವಡಿಕೆ ಮಾಡಲಾಗುತ್ತಿದೆ ಎಂದು ನಾಡಗೌಡ ತಿಳಿಸಿದರು.

ಈಗಾಗಲೇ 630 ಹಸುಗಳಿಗೆ ಚಿಪ್ ಅಳವಡಿಕೆ ಮಾಡಿದ್ದು, ಇದರಿಂದ ಫಲಾನುಭವಿಗಳು ಹಸುಗಳನ್ನು ಮಾರಾಟ ಮಾಡಲು ಆಗುವುದಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಹಸು ಎಲ್ಲಿದೆ ಎಂಬುದು ಗೊತ್ತಾಗಲಿದೆ ಎಂದು ಅವರು ಮಾಹಿತಿ ನೀಡಿದರು.

1.20 ಲಕ್ಷ ರೂ.ವೆಚ್ಚದಲ್ಲಿ ಫಲಾನುಭವಿಗಳಿಗೆ 2 ಹಸುಗಳನ್ನು ವಿತರಣೆ ಮಾಡುತ್ತಿದ್ದು, ಎಸ್ಸಿ-ಎಸ್ಟಿ ವರ್ಗದವರಿಗೆ ಶೇ.90ರಷ್ಟು ಸಬ್ಸಿಡಿ, ಶೇ.10ರಷ್ಟು ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸಾಮಾನ್ಯ ವರ್ಗದವರಿಗೆ ಶೇ.25ರಷ್ಟು ಸಬ್ಸಿಡಿ, ಶೇ.75ರಷ್ಟು ಸಾಲ ಸೌಲಭ್ಯದಡಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

‘ಬೋಟ್ ನಾಪತ್ತೆ ಹಿನ್ನೆಲೆಯಲ್ಲಿ ಈಗಾಗಲೇ ಮೀನುಗಾರರ ಕುಟುಂಬಕ್ಕೆ ತಲಾ 11 ಲಕ್ಷ ರೂ.ಪರಿಹಾರ ವಿತರಣೆ ಮಾಡಲಾಗಿದೆ. ನೌಕಾಪಡೆ ಹಡಗು ಢಿಕ್ಕಿ ಹೊಡೆದ ಪರಿಣಾಮ ಸುವರ್ಣ ತ್ರಿಭುಜ ಬೋಟ್ ಅಪಘಾತಕ್ಕೀಡಾಗಿದೆ ಎಂದು ಗೊತ್ತಾಗಿದೆ. ಹೀಗಾಗಿ ತನಿಖೆಗೆ ಮುಖ್ಯ ಕಾರ್ಯದರ್ಶಿ ಮೂಲಕ ಕೇಂದ್ರ ಪತ್ರ ಬರೆಯಲಾಗಿದೆ. ಕೇಂದ್ರ ಸರಕಾರವು ಮೀನುಗಾರರ ನೆರವಿಗೆ ಧಾವಿಸಬೇಕು’

-ವೆಂಕಟರಾವ್ ನಾಡಗೌಡ, ಮೀನುಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News