ಆಕಾರಕ್ಕಿಂತ ಆಚರಣೆಯಲ್ಲಿ ಮನುಷ್ಯರಾಗಿ ಬದುಕುವುದು ಅತ್ಯಂತ ಕಷ್ಟ: ಸಿದ್ದಲಿಂಗ ಸ್ವಾಮೀಜಿ

Update: 2019-06-16 18:49 GMT

ತುಮಕೂರು,ಜೂ.16: ಸಮಾಜದಲ್ಲಿ ಆಕಾರದಲ್ಲಿ ಮನುಷ್ಯನಾಗಿ ಬಾಳುವುದಕ್ಕಿಂತ, ಆಚರಣೆಯಲ್ಲಿ ಮನುಷ್ಯನಾಗಿ ಬದುಕುವುದು ಅತ್ಯಂತ ಕಷ್ಟದ ಕೆಲಸ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಬಾಲಭವನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ರಮಝಾನ್ ಈದ್ ಸೌಹಾರ್ದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂಜಿನಿಯರ್, ಡಾಕ್ಟರ್, ಐಎಎಸ್ ಅಧಿಕಾರಿ ಏನಾದರೂ ಆಗಿ ಬದುಕಬಹುದು, ಆದರೆ ಒಳ್ಳೆಯ ಮಾನವೀಯತೆಯುಳ್ಳ, ಮನುಷ್ಯರಾಗಿ ಬದುಕುವುದು ಅತ್ಯಂತ ಕಷ್ಟ ಕೆಲಸ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನವಿರಲಿ ಎಂದರು.

ಯಾವುದೇ ಧರ್ಮ ಹಿಂಸೆ, ದ್ವೇಷವನ್ನು ಪ್ರತಿಪಾದಿಸುವುದಿಲ್ಲ. ಶಾಂತಿ ಎಲ್ಲ ಧರ್ಮಗಳ ಸಾರ. ಜಾತಿ, ಮತ ಹಾಗೂ ಧರ್ಮದ ನಡುವೆ ಸಾಕಷ್ಟು  ವ್ಯತ್ಯಾಸವಿದ್ದು, ಇದನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ, ಮನುಷ್ಯರ ಹೃದಯ ಒಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ಇನ್ನೊಬ್ಬರ ಕಣ್ಣೀರು ಒರೆಸುವುದೇ ನಿಜವಾದ ಧರ್ಮ. ಕಾಯಕ ಜೀವಿಗಳಾದ ಮುಸ್ಲಿಮರು, ಝಕಾತ್ ಹೆಸರಿನಲ್ಲಿ ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಬಡವರಿಗೆ ದಾನ ಮಾಡುವ ಮೂಲಕ ನಿಜ ಅರ್ಥದಲ್ಲಿ ಬಸವಣ್ಣನ ಕಾಯಕ, ದಾಸೋಹ ತತ್ವದಲ್ಲಿ ನಡೆಯುತ್ತಿದ್ದಾರೆ ಎಂದು ಶ್ರೀಸಿದ್ದಲಿಂಗ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಮಾಅತೆ ಇಸ್ಲಾಮಿ ಹಿಂದ್‍ ರಾಜ್ಯ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಉಡುಪಿ, ಹಲವು ಭಿನ್ನತೆ ನಡುವೆ ನಾವು ಕುಟುಂಬದಲ್ಲಿ ಕಾಪಾಡಿಕೊಳ್ಳುವ ಸೌಹಾರ್ದತೆ ಸಮಾಜಕ್ಕೂ ವಿಸ್ತರಣೆಯಾಗಬೇಕಿದೆ. ಮನುಷ್ಯತ್ವ ನಮ್ಮ ಗುರುತಾಗಬೇಕು. ಇನ್ನೊಬ್ಬರ ನೋವು ಕಂಡು ನಗುವವನು ಮನುಷ್ಯನಾಗಿರಲು ಸಾಧ್ಯವಿಲ್ಲ. ಎಲ್ಲರ ಕಣ್ಣೀರು ಒರೆಸುವ ಬೆರಳುಗಳ ಸಂಖ್ಯೆ ಹೆಚ್ಚಬೇಕಿದೆ. ರಮಝಾನ್ ಹಬ್ಬ ಮನಸ್ಸುಗಳನ್ನು ಬೆಸೆಯುವ, ಪ್ರೀತಿ, ಶಾಂತಿ ಹರಡುವ ಹಬ್ಬ. ವೈವಿದ್ಯತೆ ಈ ದೇಶದ ಆಸ್ತಿ. ಇದನ್ನು ಕಾಪಾಡಿಕೊಂಡು ಹೋಗುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಿದೆ. ದೀಪಾವಳಿ, ರಮಝಾನ್, ಕ್ರಿಸ್ಮಮಸ್ ಹಬ್ಬಗಳು ಎಲ್ಲಾ ಸಮುದಾಯದವರು ಒಟ್ಟಿಗೆ ಆಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್‍ನ ಪ್ರಧಾನ ಕಾರ್ಯದರ್ಶಿ ಯೂಸಫ್ ಕುನ್ನಿ ವಹಿಸಿದ್ದರು. ವೇದಿಕೆಯಲ್ಲಿ ರೆಡ್‍ಕ್ರಾಸ್ ಸೊಸೈಟಿ ಸಭಾಪತಿ ಎಸ್.ನಾಗಣ್ಣ, ಜಾಮೀಯಾ ಮಸೀದಿಯ ಉಮರ್ ಅನಾರಿ ನದ್ವಿ, ಲೀಜುಲ್ಲಾ ಖಾನ್ ಮನ್ಸೂರಿ, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷ ಹನೀಪುಲ್ಲಾ ಸಾಹೇಬ್, ರಿಯಾಝ ಅಹಮದ್ ರೋಣ, ಮುಸ್ತಾಕ್ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News