ನಿರ್ಲಕ್ಷಿಸಲ್ಪಡುವ ನವಜಾತ ಶಿಶುಗಳನ್ನು ರಕ್ಷಿಸಲಿದೆ 'ಮಮತೆಯ ತೊಟ್ಟಿಲು'

Update: 2019-06-17 12:05 GMT

ಮಡಿಕೇರಿ, ಜೂ.17: ಇತ್ತೀಚಿನ ದಿನಗಳಲ್ಲಿ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸರಕಾರ 'ಮಮತೆಯ ತೊಟ್ಟಿಲು' ಯೋಜನೆಯನ್ನು ಜಾರಿಗೆ ತಂದಿದೆ. ಮಡಿಕೇರಿಯಲ್ಲೂ 'ಮಮತೆಯ ತೊಟ್ಟಿಲು' ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.

ನಿರ್ಲಕ್ಷಿಸಲ್ಪಡುವ ನವಜಾತ ಶಿಶುಗಳನ್ನು ರಕ್ಷಣೆ ಮಾಡಿ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಕೇಂದ್ರವನ್ನು ಆರಂಭಿಸಲು ಮುಂದಾಗಿದೆ. ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಸುಮಾರು 1.60 ಲಕ್ಷ ರೂ. ವೆಚ್ಚದಲ್ಲಿ 'ಮಮತೆಯ ತೊಟ್ಟಿಲು' ಕೇಂದ್ರ ನಿರ್ಮಾಣಗೊಂಡಿದೆ.

ಹೆತ್ತವರಿಂದ ತ್ಯಜಿಸಲ್ಪಟ್ಟ ಅನಾಥ ಮಗುವಿಗೆ ಸುರಕ್ಷಿತ ಆಶ್ರಯ ಒದಗಿಸುವ ಮೂಲಕ ಶಿಶು ಮರಣ ಪ್ರಮಾಣ ಕುಗ್ಗಿಸುವ ಉದ್ದೇಶದಿಂದ ಹಾಗೂ ಮಗುವಿನ ಬದುಕು ಬರಡಾಗಬಾರದು ಎಂಬ ಆಶಯದೊಂದಿಗೆ ಈ ಯೋಜನೆ ಜಾರಿಗೆ ಬರಲಿದೆ. ಅಸಹಜ ಕಾರಣಕ್ಕೆ ಜನಿಸಿದ ಮಗುವನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವ ಪ್ರಕರಣಗಳು ಕಂಡು ಬರುತ್ತಿದೆ. ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ, ಪೊದೆಗಳು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಲಾಗುತ್ತಿದೆ. ಎಳೆಯ ಜೀವಗಳನ್ನು ಬೀದಿ ನಾಯಿ, ವಿಷ ಜಂತುಗಳಿಗೆ ಬಲಿ ನೀಡುವ ಬದಲು ಮಮತೆಯ ತೊಟ್ಟಿಲಿನಲ್ಲಿ ಬಿಟ್ಟಲ್ಲಿ ಭವಿಷ್ಯದ ಕುಡಿಯ ಭವಿಷ್ಯವನ್ನು ಹಸನುಗೊಳಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ಮುಮ್ತಾಜ್ ಅಭಿಪ್ರಾಯಪಡುತ್ತಾರೆ.

ಈ ಕೊಠಡಿಯ ಒಳಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಮಮತೆಯ ತೊಟ್ಟಿಲಿನಲ್ಲಿ ಶಿಶುವನ್ನು ಇಟ್ಟು ಹೋದವರ ಕುರಿತು ಗೌಪ್ಯತೆ ಕಾಪಾಡಲಾಗುವುದು ಅಲ್ಲದೇ, ಯಾವುದೇ ಸಿ.ಸಿ ಟಿವಿ ಕ್ಯಾಮರಾ ಈ ಪ್ರದೇಶದಲ್ಲಿ ಅಳವಡಿಸಲಾಗುವುದಿಲ್ಲ. ಅತ್ಯಾಧುನಿಕ ವಿನ್ಯಾಸದ ತೊಟ್ಟಿಲು ಇದಾಗಿದ್ದು, ಸ್ವಯಂ ಚಾಲಿತ ಬಾಗಿಲು, ಮಗುವಿನ ರಕ್ಷಣೆಗೆ ಪೂರಕವಾದ ತಾಪಮಾನದ ನಿಯಂತ್ರಣಾ ವ್ಯವಸ್ಥೆ ಇಲ್ಲಿದೆ. ಮಗುವಿನ ಇರುವಿಕೆಯನ್ನು ಗುರುತಿಸಲು ಸೆನ್ಸಾರ್ ಅಳವಡಿಸಲಾಗಿದೆ. ಅಲರಾಂ ಮತ್ತು ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡುವ ತಂತ್ರಜ್ಞಾನ ಹೊಂದಿದೆ.

21 ಶಿಶುಗಳು ಅನಾಥ
ಜಿಲ್ಲೆಯಲ್ಲಿ 2012-13ನೇ ಸಾಲಿನಿಂದ 2018 -19ನೇ ಸಾಲಿನವರೆಗೆ ಒಟ್ಟು 21 ಶಿಶುಗಳನ್ನು ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇವುಗಳಲ್ಲಿ 14 ಗಂಡು ಹಾಗೂ 7 ಹೆಣ್ಣು ಮಕ್ಕಳನ್ನು ಬಿಡಲಾಗಿದೆ. ಜಿಲ್ಲೆಯಲ್ಲಿ ಸದ್ಯ 'ಮಮತೆಯ ತೊಟ್ಟಿಲು' ಯೋಜನೆಯ ಒಂದು ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ನಿರ್ಲಕ್ಷಿಸಲ್ಪಡುವ ನವಜಾತ ಶಿಶುವಿನ ರಕ್ಷಣೆಯಾಗಲಿದೆ ಎಂದು ಮುಮ್ತಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಮಾರಾಟಕ್ಕೆ ಜೈಲು ಶಿಕ್ಷೆ
ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧವಾಗಿದ್ದು, ಮಾರಾಟ ಮಾಡುವವರಿಗೆ ಅಥವಾ ಕೊಳ್ಳವವರಿಗೆ ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 81ರ ಅನ್ವಯ 5 ವರ್ಷಗಳ ಸೆರೆಮನೆ ವಾಸದೊಂದಿಗೆ ರೂ.1 ಲಕ್ಷ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆ ಸಿಬ್ಬಂದಿ ಶಾಮೀಲಾದರೆ ಶಿಕ್ಷೆಯ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಣೆಯಾಗಲಿದೆ. 

ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು, ಮಗು ಬೇಡವೆಂದಾದಲ್ಲಿ ತ್ಯಜಿಸುವುದು ಅಥವಾ ಮಾರಾಟ ಮಾಡುವ ಬದಲು ಮಮತೆಯ ತೊಟ್ಟಿಲಿನಲ್ಲಿ ಇಡಿ. ಈ ಮಕ್ಕಳನ್ನು ಕಾನೂನು ರೀತಿ ದತ್ತು ಪ್ರಕ್ರಿಯೆಗೆ ಒಳಪಡಿಸಿ ಉತ್ತಮ ಭವಿಷ್ಯವನ್ನು ರೂಪಿಸಲಾಗುವುದು.
- ಮುಮ್ತಾಝ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News