ಬಾಲ್ಯ ವಿವಾಹ: ಹಾಲ್ ಮಾಲಕ, ಅರ್ಚಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಶಿವಮೊಗ್ಗ ಡಿಸಿ ಸೂಚನೆ

Update: 2019-06-17 18:34 GMT

ಶಿವಮೊಗ್ಗ, ಜೂ. 17: ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ದಾಖಲೆಯಾಗಿರುವ ಎಲ್ಲಾ 11 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸಂಬಂಧಿಕರು ಮಾತ್ರವಲ್ಲದೆ, ಕಲ್ಯಾಣ ಮಂಟಪದ ಮಾಲಕರು ಹಾಗೂ ಮದುವೆ ಮಾಡಿಸಿದ ಅರ್ಚಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಸೋಮವಾರ ನಗರದ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಅನುಷ್ಟಾನ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 3 ಪ್ರಕರಣಗಳಲ್ಲಿ ಕಲ್ಯಾಣ ಮಂಟಪದ ಮಾಲಕರ ವಿರುದ್ಧ ಹಾಗೂ ಒಂದು ಪ್ರಕರಣದಲ್ಲಿ ಅರ್ಚಕರ ಹಾಗೂ ಫೊಟೋಗ್ರಾಫರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಉಳಿದ ಎಲ್ಲಾ ಪ್ರಕರಣಗಳನ್ನು ಸಹ ಪರಿಶೀಲಿಸಿ ಕಲ್ಯಾಣ ಮಂಟಪದ ಮಾಲಕರ ವಿರುದ್ಧ ಹಾಗೂ ಅರ್ಚಕರ ವಿರುದ್ಧ ಪ್ರಕರಣದ ದಾಖಲಿಸಬೇಕು. ಶಿವಮೊಗ್ಗ ನಗರದ ಗುಡ್ಡೇಕಲ್ ದೇವಸ್ಥಾನದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಸಿ ಟಿವಿ ಅಳವಡಿಸಬೇಕು. ಅರ್ಚಕರಿಗೆ ಈ ಕುರಿತು ಎಚ್ಚರಿಕೆ ನೀಡಬೇಕು ಎಂದು ಡಿ.ಸಿ. ಸೂಚಿಸಿದ್ದಾರೆ. 

2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಬಗ್ಗೆ 65 ದೂರುಗಳನ್ನು ಸ್ವೀಕರಿಸಲಾಗಿದ್ದು, 44 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ಬಾಲ್ಯ ವಿವಾಹ ತಡೆಯಲು ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಚ್ಚು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಕೌಟುಂಬಿಕ ಸಂರಕ್ಷಣಾ ಕಾಯ್ದೆ: ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 234 ಪ್ರಕರಣಗಳು ದಾಖಲಾಗಿದ್ದು, ಒಟ್ಟು 125 ಪ್ರಕರಣಗಳನ್ನು ಸಂರಕ್ಷಣಾಧಿಕಾರಿಗಳು ಸಮಾಲೋಚನೆ ಮೂಲಕ ಇತ್ಯರ್ಥಪಡಿಸಿದ್ದಾರೆ. 33 ಪ್ರಕರಣಗಳು ನ್ಯಾಯಾಲಯದಲ್ಲಿವೆ. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ 1ವರ್ಷದ ವರೆಗೆ ಮತ್ತು ಸಂಕಷ್ಟದಲ್ಲಿರುವ/ಅತಿ ಅಗತ್ಯ ಇರುವ ಮಹಿಳೆಯರಿಗೆ ತಾತ್ಕಾಲಿಕ ವಸತಿ ಒದಗಿಸುವ ಸ್ವಧಾರ ಗೃಹ ಯೋಜನೆಯಡಿ ಕಳೆದ ಒಂದು ವರ್ಷದ ಅವಧಿಯಲ್ಲಿ ಒಟ್ಟು 187ಮಹಿಳೆಯರು ಹಾಗೂ 46 ಮಕ್ಕಳು ಪುನರ್ವಸತಿ ಪಡೆದಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ಎಎಸ್ಪಿ ಡಾ.ಎಚ್.ಟಿ.ಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ ಮತ್ತಿತರರು ಉಪಸ್ಥಿತರಿದ್ದರು.

ಗೆಳತಿ ಚಿಕಿತ್ಸಾ ಘಟಕಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ
ಮೆಗ್ಗಾನ್ ಆಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಗೆಳತಿ ಚಿಕಿತ್ಸಾ ಘಟಕದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಒಟ್ಟು 105 ಮಂದಿ ವಿವಿಧ ಪ್ರಕರಣಗಳಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ. ಇಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.  ಕೌಟುಂಬಿಕ ದೌರ್ಜನ್ಯ, ಲೈಂಗಿಕ ಅಪರಾಧ, ಅತ್ಯಾಚಾರ, ಬಾಲ್ಯ ವಿವಾಹ ಮುಂತಾದ ಪ್ರಕರಣಗಳಲ್ಲಿ ಗೆಳತಿ ಚಿಕಿತ್ಸಾ ಘಟಕದಲ್ಲಿ ಕಾನೂನು ನೆರವು, ಸಮಾಲೋಚನೆ, ವೈದ್ಯಕೀಯ ನೆರವು, ಪೊಲೀಸ್ ನೆರವು ಇತ್ಯಾದಿ ಒದಗಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News