ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣ: ಖಾಸಗಿ ಆಸ್ಪತ್ರೆ ವೈದ್ಯರಿಗೆ ಗ್ರಾಹಕ ನ್ಯಾಯಾಲಯದಿಂದ 6 ಲಕ್ಷ ರೂ. ದಂಡ

Update: 2019-06-17 18:36 GMT

ಶಿವಮೊಗ್ಗ, ಜೂ. 17: ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ವೈದ್ಯರ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸಿದ ಪ್ರಕರಣದಲ್ಲಿ ಗೀತಾ ಎಂಬ ಮಹಿಳೆಗೆ ರೂ. 6 ಲಕ್ಷ ರೂ. ಪರಿಹಾರ ಒದಗಿಸಲು ಆದೇಶಿಸಿದೆ.

ಪ್ರಕರಣ ವಿವರ: ಕೆ.ಎ.ಗೀತಾ ಎಂಬವರು ತಮ್ಮ ದೈಹಿಕ ತೊಂದರೆ ಹಿನ್ನೆಲೆಯಲ್ಲಿ, ವೈದ್ಯರ ಸಲಹೆಯಂತೆ ರಾಘವೇಂದ್ರ ನರ್ಸಿಂಗ್ ಹೋಂ ಶಿವಮೊಗ್ಗದಲ್ಲಿ ವೈದ್ಯರಾಗಿರುವ ಡಾ.ಎಂ.ಮುರಳೀಧರ ರಾವ್ ಮತ್ತು ಡಾ.ವಿಜಯಲಕ್ಷ್ಮಿ ರವೀಶ್ ಇವರಲ್ಲಿ ಗರ್ಭಕೋಶದ ಶಸ್ತ್ರಚಿಕಿತ್ಸೆ ಒಳಗಾಗಿದ್ದರು. ಆದರೆ ಆ ಬಳಿಕ ವಿಪರೀತ ಜ್ವರ ಬಂದು ಪರಿಶೀಲಿಸಿದಾಗ ಗೀತಾ ಅವರ ಎಡಭಾಗದ ಕಿಡ್ನಿಯಲ್ಲಿ ಮೂತ್ರ ಶೇಖರಣೆಯಾಗಿ ಲಿವರ್, ಮೂತ್ರಕೋಶ ಹಿಗ್ಗಿ, ಮೂತ್ರನಾಳದಲ್ಲಿ ಅಡತಡೆಯುಂಟಾಗಿ ತೊಂದರೆ ಅನುಭವಿಸಬೇಕಾಯಿತು. 

ಗರ್ಭಕೋಶದ ಶಸ್ತ್ರಚಿಕಿತ್ಸೆಯನ್ನು ಮಾಡುವ ಸಂದರ್ಭದಲ್ಲಿ ಯುರೇಟರ್ ಸೇರುವ ಮೂತ್ರನಾಳ ಹಾನಿಗೊಳಗಾದ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ ಎಂದು ತಜ್ಞ ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶಸ್ತ್ರಚಿಕತ್ಸೆಗೆ ಒಳಗಾಗಿದ್ದರು.

ಗೀತಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ವೈದ್ಯಕೀಯ ನಿರ್ಲಕ್ಷ್ಯತನದ ಸೇವಾ ನೂನ್ಯತೆಯನ್ನು ಪ್ರಶ್ನಿಸಿ ದೂರು ದಾಖಲಿಸಿದ್ದರು. ದೂರನ್ನು ಕೈಗೆತ್ತಿಕೊಂಡ ವೇದಿಕೆಯು ವಿಚಾರಣೆ ಮಾಡಿ ಸೂಕ್ತ ದಾಖಲೆಗಳನ್ನು ಪರೀಶೀಲಿಸಿದಾಗ ವೈದ್ಯರಾದ ಡಾ.ಮುರಳೀಧರರಾವ್, ಡಾ.ವಿಜಯಲಕ್ಷ್ಮೀ ರವೀಶ್ ಅವರು ವೈದ್ಯಕೀಯ ನಿರ್ಲಕ್ಷ್ಯತನ ತೋರಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ, ತೊಂದರೆಗೊಳಗಾದ ಗೀತಾರವರಿಗೆ ಆಗಿರುವ ಖರ್ಚು ಮತ್ತು ಮಾನಸಿಕ ನೋವು, ಹಿಂಸೆಗಾಗಿ 6 ಲಕ್ಷ ರೂ. ಗಳ ಪರಿಹಾರ, ಪ್ರಕರಣ ದಾಖಲಿಸಿದ ದಿನಾಂಕದಿಂದ ವಾರ್ಷಿಕ ಬಡ್ಡಿ ಶೇ. 6 ರಷ್ಟು ಹಾಗೂ ಪ್ರಕರಣ ದಾಖಲಿಸಲು ಆದ ಖರ್ಚುವೆಚ್ಚಗಳಿಗಾಗಿ 30 ಸಾವಿರ ರೂ. ಗಳನ್ನು 6 ವಾರಗಳೊಳಗೆ ಕೊಡುವಂತೆ ಆದೇಶ ನೀಡಿದೆ.  

ತಪ್ಪಿದ್ದಲ್ಲಿ ವಾರ್ಷಿಕ ಶೇ.10 ರಷ್ಟು ಬಡ್ಡಿ ಸಹ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ ಎಂದು ವೇದಿಕೆಯ ಸಹಾಯಕ ನೋಂದಣಿ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News