ತಮಿಳುನಾಡಿನಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆ: ಐಟಿ ಸಂಸ್ಥೆಗಳು, ಹೋಟೆಲ್‌ಗಳಲ್ಲಿ ನೀರಿನ ಕೊರತೆ

Update: 2019-06-17 18:45 GMT

ಚೆನ್ನೈ, ಜೂ.17: ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಚೆನ್ನೈ ನಗರಕ್ಕೆ ನೀರುಣಿಸುವ ಪೊರೂರು ಕೆರೆಯ ನೀರು ಈಗ ಸಾರ್ವಕಾಲಿಕ ತಳಮಟ್ಟಕ್ಕೆ ಕುಸಿದಿದೆ. ಚೆನ್ನೈ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈಗ ಉಪ್ಪುಹೀರಿಕೆ ಘಟಕ ಹಾಗೂ ಕಾಂಚಿಪುರಂ ಜಿಲ್ಲೆಯ ಕಲ್ಲು ಗಣಿಗಳಿಂದ ನೀರನ್ನು ಪಡೆಯಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

ಐಟಿ, ಆಸ್ಪತ್ರೆ ಮತ್ತು ರೆಸ್ಟಾರೆಂಟ್‌ಗಳು ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲೂ ನೀರಿನ ಸಮಸ್ಯೆ ಬಿಗಡಾಯಿಸಿದೆ. ಚೆನ್ನೈಯ ಕೆಲವು ಐಟಿ ಸಂಸ್ಥೆಗಳು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಉದ್ಯೋಗಿಗಳಿಗೆ ಸೂಚಿಸಿದೆ. ನಗರದ ಹೊರವಲಯದ ಹಲವು ಹೋಟೆಲ್‌ಗಳು ನೀರಿನ ಕೊರತೆಯಿಂದ ಬಾಗಿಲು ಮುಚ್ಚುವಂತಾಗಿದೆ. ಕೆಲವು ಹೋಟೆಲ್‌ಗಳು ತಟ್ಟೆ ತೊಳೆಯಲು ನೀರಿಲ್ಲದ ಕಾರಣ ಪೇಪರ್ ಕಪ್ ಮತ್ತು ಪ್ಲೇಟ್ ಬಳಸುತ್ತಿವೆ. ಹಲವು ಹೋಟೆಲ್‌ಗಳು ಮಧ್ಯಾಹ್ನದ ಊಟವನ್ನು ಸ್ಥಗಿತಗೊಳಿಸಿದೆ. ನೀರು ಪೂರೈಸುವ ಖಾಸಗಿ ಟ್ಯಾಂಕರ್‌ಗಳೂ ಈಗ ನಿಯಮಿತವಾಗಿ ನೀರು ಪೂರೈಸುತ್ತಿರುವ ಕಾರಣ ಹೋಟೆಲ್‌ಗಳ ನೀರಿನ ಬೇಡಿಕೆ ಶೇ.25ರಷ್ಟು ಹೆಚ್ಚಿದೆ. ಹಲವು ಹೋಟೆಲ್‌ಗಳಲ್ಲಿ ಊಟ ಬಡಿಸಲು ತಟ್ಟೆಯ ಬದಲು ಬಾಳೆ ಎಲೆ ಬಳಸಲಾಗುತ್ತಿದೆ.

ಜೊತೆಗೆ ಕೈತೊಳೆಯಲು ಬೆರಳು ಬೋಗುಣಿ(ಫಿಂಗರ್ ಬೌಲ್ಸ್)ಯಲ್ಲಿ ನೀರು ಒದಗಿಸಲು ನಿರ್ಧರಿಸಲಾಗಿದೆ. 100 ಗ್ರಾಹಕರಿಗೆ ಆಸನ ವ್ಯವಸ್ಥೆಯಿರುವ ಹೋಟೆಲ್‌ಗಳಿಗೆ ದಿನಕ್ಕೆ 12 ಸಾವಿರ ಲೀಟರ್ ನೀರು ಬೇಕಾಗುತ್ತದೆ ಎಂದು ಚೆನ್ನೈ ಹೋಟೆಲ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಎಂ ರವಿ ಹೇಳಿದ್ದಾರೆ. ಕೆಲವು ಐಟಿ ಸಂಸ್ಥೆಯ ಕಚೇರಿಗಳ ಪರ್ಯಾಯ (ಎರಡು ಮಹಡಿಗಳಲ್ಲಿ ಒಂದರಲ್ಲಿ ಮಾತ್ರ) ಮಹಡಿಯ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಲಾರಿಗಳಲ್ಲಿ ಟ್ಯಾಂಕರ್ ಮೂಲಕ ಪೂರೈಕೆಯಾಗುವ ನೀರಿನ ಪ್ರಮಾಣವನ್ನು ಇದು ಅವಲಂಬಿಸಿದೆ ಎಂದು ಖಾಸಗಿ ಐಟಿ ಸಂಸ್ಥೆಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಅನಿವಾರ್ಯವಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗುತ್ತಿದೆ. ಮೂರು ಹಾಸಿಗೆಗಳಿರುವ ಶಸ್ತ್ರಚಿಕಿತ್ಸೆ ಕೋಣೆಗೆ ದಿನಕ್ಕೆ 6 ಸಾವಿರ ಲೀಟರ್ ನೀರಿನ ಅಗತ್ಯವಿದೆ. ಆದ್ದರಿಂದ ಈಗಲೇ ಅಗತ್ಯವಿರದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಸಲಹೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ನೀರಿಗಾಗಿ ಈಗ ಸ್ಥಳೀಯರಲ್ಲಿ ಜಗಳ, ಘರ್ಷಣೆ ಆರಂಭವಾಗಿದೆ.

 ಕಳೆದ ಗುರುವಾರ ಚೆನ್ನೈಯ ಶಂಕರ್‌ನಗರದ ಅಪಾರ್ಟ್‌ಮೆಂಟ್‌ನಲ್ಲಿ ನೀರಿನ ವಿಷಯದಲ್ಲಿ ಆರಂಭವಾದ ಜಗಳದಲ್ಲಿ ಒಬ್ಬ ಮಹಿಳೆ ಮತ್ತೊಬ್ಬಳಿಗೆ ಚೂರಿಯಿಂದ ಇರಿದಿದ್ದು ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆದರೆ, ಚೆನ್ನೈ ನಗರದಲ್ಲಿ ಪರಿಸ್ಥಿತಿ ಕಲ್ಪಿಸಿಕೊಂಡಿರುವಷ್ಟು ಹದಗೆಟ್ಟಿಲ್ಲ ಎಂದು ಚೆನ್ನೈ ಮಹಾನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯ ಆಡಳಿತ ನಿರ್ದೇಶಕ ಟಿಎನ್ ಹರಿಹರನ್ ಹೇಳಿದ್ದಾರೆ. ಚೆನ್ನೈ ನಗರಕ್ಕೆ ದಿನಂಪ್ರತಿ 830 ಮಿಲಿಯನ್ ಲೀಟರ್ ನೀರಿನ ಅಗತ್ಯವಿದ್ದು ಈಗ ದಿನಕ್ಕೆ 525 ಮಿಲಿಯನ್ ಲೀಟರ್ ಪೂರೈಕೆಯಾಗುತ್ತಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News