ಲಕ್ಷಾಂತರ ರೂ.ಮೌಲ್ಯದ ಮರ ಸಾಗಾಟಕ್ಕೆ ಯತ್ನ: ಮಾಲು ಸಮೇತ ನಾಲ್ವರ ಬಂಧನ

Update: 2019-06-17 18:45 GMT

ಮಡಿಕೇರಿ, ಜೂ.17: ಲಕ್ಷಾಂತರ ಮೌಲ್ಯದ ಅಕ್ರಮ ಮರ ಸಾಗಾಟ ಮತ್ತು ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಸಂಗ್ರಹಿಸಲಾಗಿದ್ದ ಬೆಲೆ ಬಾಳುವ ಮರದ ನಾಟಗಳನ್ನು ವಶ ಪಡಿಸಿಕೊಂಡಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದೆ.

ಇತ್ತೀಚಿನ ದಿನಗಳಲ್ಲೇ ಅತೀ ದೊಡ್ಡ ಅಕ್ರಮ ಮರ ಸಾಗಾಟ ಪ್ರಕರಣ ಭೇದಿಸಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು ಕುಟ್ಟ ಠಾಣೆಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಲಾರಿ ಚಾಲಕ ನಾಲ್ಕೇರಿಯ ರಾಜೇಂದ್ರ(54), ಕಾರ್ಮಿಕ ಕೆ.ಬಾಡಗ ಗ್ರಾಮದ ಅಯ್ಯಪ್ಪ(26), ಕೆ.ಬಾಡಗದ ನೋಬನ್(58) ಮತ್ತು ಚೆನ್ನಂಗೊಲ್ಲಿಯ ದಾವೂದ್(45) ಎಂಬುವವರು ಬಂಧಿತ ಆರೋಪಿಗಳು.

ನಾಲ್ಕೇರಿ ಬಾಡಗ ಗ್ರಾಮದಲ್ಲಿ ಅಕ್ರಮವಾಗಿ ಕಡಿದ ಮರಗಳ ನಾಟಗಳನ್ನು ಲಾರಿಯೊಂದರಲ್ಲಿ ತುಂಬಿ, ಅದರ ಮೇಲೆ ಮರದ ಹೊಟ್ಟು ತುಂಬಿದ್ದ ಚೀಲಗಳನ್ನು ಇಡಲಾಗಿತ್ತು. ಮರ ಸಾಗಾಟದ ಸುಳಿವು ತಿಳಿಯದಂತೆ ಗೋಣಿಕೊಪ್ಪ ಕಡೆಗೆ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ದೊರೆತಿದ್ದ ಖಚಿತ ಸುಳಿವನ್ನು ಆಧರಿಸಿ ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಕಾರ್ಯಾಚರಣೆಯ ಮೂಲಕ ಮಾಲು ಸಹಿತ ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಲಾರಿ ಚಾಲಕ ಮತ್ತು ಕಾರ್ಮಿಕನನ್ನು ಬಂಧಿಸಿದ ಅಪರಾಧ ಪತ್ತೆ ದಳದ ತಂಡ, ಲಾರಿಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ನೋಬನ್ ಮತ್ತು ದಾವೂದ್‍ರನ್ನು ತಮ್ಮ ವಶಕ್ಕೆ ಪಡೆದಿರುವುದಾಗಿ ಎಸ್‍ಪಿ ಮಾಹಿತಿ ನೀಡಿದರು.

ಮರ ದಾಸ್ತಾನು

ಬಂಧಿತ ನೋಬನ್‍ನ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಹಲಸು, ಹೆಬ್ಬಲಸು, ಬೀಟೆ, ತೇಗದ ಭಾರೀ ಪ್ರಮಾಣದ ನಾಟಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಮರಗಳೊಂದಿಗೆ ಲಾರಿ, ಸ್ವರಾಜ್ ಮಜ್ದಾ, ಜೀಪು, ಕಾರು ಮತ್ತು ಒಂದು ಕ್ರೈನ್‍ನ್ನು ವಶಪಡಿಸಿಕೊಂಡಿರುವುದಾಗಿ ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕ ಕೆ.ನಾಗೇಶ್ ಕದ್ರಿ, ಎಎಸ್‍ಐ ಹಮೀದ್, ಸಿಬ್ಬಂದಿಗಳಾದ ಕೆ.ಎಸ್. ಅನಿಲ್, ವಿ.ಜಿ.ವೆಂಕಟೇಶ್, ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ್, ಚಾಲಕ ಶಶಿಕುಮಾರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News