ಸಾಲ ಮರುಪಾವತಿಗೆ ಬ್ಯಾಂಕ್ ಸೂಚನೆ: ನೊಟೀಸ್ ಸುಟ್ಟು ಪ್ರತಿಭಟನೆ ನಡೆಸಿದ ರೈತರು

Update: 2019-06-17 19:00 GMT

ಹಾಸನ, ಜೂ.17: ಸರಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸರಿಯಾಗಿ ಪರಿಹಾರ ಕೊಡುತ್ತಿಲ್ಲ. ಬ್ಯಾಂಕಿನಿಂದ ಪಡೆದ ಸಾಲವನ್ನು ನೀಡುವಂತೆ ರೈತರಿಗೆ ನೊಟೀಸ್ ನೀಡಿದೆ ಎಂದು ಖಂಡಿಸಿ ಎಪಿಎಂಸಿ ಕಚೇರಿ ಮುಂದೆ ನೋಟಿಸ್ ಪ್ರತಿಯನ್ನು ಸುಟ್ಟು ಹಾಕುವುದರ ಮೂಲಕ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ರೈತರ ಮುಖಂಡಕೊಟ್ರೇಶ್ ಶ್ರೀನಿವಾಸ್ ಮಾತನಾಡಿ, ಬಸವೇಗೌಡ ಎಂಬುವರು ಕೈಸಾಲ ಮತ್ತು ಬ್ಯಾಂಕಿನ ಸಾಲಬಾಧೆಯನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡು 8 ತಿಂಗಳಾದರೂ ಇದುವರೆಗೂ ಸರಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ಈತನ ಕುಟುಂಬ ಅತ್ಯಂತ ಕಡು ಬಡತನದಿಂದ ಇದ್ದು, ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಸಾಲ ವಿಷಯದ ಎಲ್ಲಾ ದಾಖಲೆಯನ್ನು ನೀಡಿದರೂ ಇನ್ನೂ ಪರಿಹಾರ ಕೊಡದೇ ಜಿಲ್ಲಾಡಳಿತ ಸತಾಯಿಸುತ್ತಿದೆ ಎಂದು ದೂರಿದರು.

ಕೂಡಲೇ ಪರಿಹಾರ ಕೊಡದೇ ಹೋದರೆ ಕೆಲ ದಿನಗಳಲ್ಲಿ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು. ಸಾಲಮನ್ನಾ ಎಂದು ಸರಕಾರ ಹೇಳುತ್ತಿದ್ದು, ಅರಸೀಕೆರೆ ತಾಲೂಕಿನಲ್ಲಿ ಕೆನರಾ ಬ್ಯಾಂಕಿನ ಅಧಿಕಾರಿಗಳು ನ್ಯಾಯಾಲಯದ ಮೂಲಕ ರೈತರಿಗೆ ನೊಟೀಸ್ ಜಾರಿ ಮಾಡಿ, ಹಾಜರಾಗುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ರೈತರಿಗೆ ನೀಡಿರುವ ನೋಟಿಸನ್ನು ಸುಟ್ಟು ಹಾಕಿ ಪ್ರತಿಭಟನೆ ಮಾಡಲಾಗಿದೆ. ಕೋರ್ಟಿಗೆ ನಾವು ಯಾರೂ ಹಾಜರಾಗುವುದಿಲ್ಲ. ಕೋರ್ಟಿಗೂ ರೈತರು ಪಡೆದ ಸಾಲಕ್ಕೂ ಯಾವ ಸಂಬಂಧ ಇಲ್ಲ ಎಂದ ಅವರು, ಬಹಳ ರೈತರಿಗೆ ಬೆಲೆ ವಿಮೆ ಕೂಡ ಸಿಕ್ಕಿಲ್ಲ. ಎಲ್ಲವನ್ನು ರೈತರ ಸಭೆಯಲ್ಲಿ ನಿರ್ಧರಿಸಿದ್ದು, ಕೂಡಲೇ ಸರಕಾರ ಎಚ್ಚೆತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದರು. 

ಎಪಿಎಂಸಿ ಮುಂದೆ ಬಿ.ಎಂ. ರಸ್ತೆಯ ಮಧ್ಯೆ ಪ್ರತಿಭಟನೆ ಮಾಡಿದ್ದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದಕ್ಕೆ ಮೊದಲು ಸಭೆ ಸೇರಿ ರೈತರ ಮುಖ್ಯ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಂಡರು.

ಈ ಸಂದರ್ಭ ಜಿಲ್ಲಾ ರೈತರ ಮುಖಂಡರಾದ ಕೊಟ್ರೇಶ್ ಶ್ರೀನಿವಾಸ್, ಬಳ್ಳೂರ್ ಸ್ವಾಮೀಗೌಡ, ಶ್ರೀಕಂಠ ದೊಡ್ಡೇರಿ, ಮಲ್ಲೇಶ್, ಯೋಗಣ್ಣ, ಹೊಳೆನರಸೀಪುರದ ರುದ್ರೇಗೌಡ, ಚನ್ನರಾಯಪಟ್ಟಣದ ಸುರೇಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News