ಮೋದಿ ರೈತರ ಆದಾಯ ದುಪ್ಪಟ್ಟುಗೊಳಿಸುವುದು ಹೇಗೆ? ಡಬ್ಲ್ಯುಟಿಓ ಸಭೆಗೆ ಕುತೂಹಲಕರ ಪ್ರಶ್ನೆ

Update: 2019-06-18 04:44 GMT

ಜಿನೀವಾ, ಜೂ.18: ಭಾರತ ಹಾಗೂ ಅಮೆರಿಕದಲ್ಲಿ ರೈತರಿಗೆ ನೀಡಲಾಗುತ್ತಿರುವ ಭಾರೀ ನೆರವಿನ ಬಗ್ಗೆ ವಿಶ್ವ ವ್ಯಾಪಾರ ಸಂಸ್ಥೆಯ ಸಭೆಗೆ ಪ್ರಶ್ನೆಗಳ ಸುರಿಮಳೆ ಬಂದಿದೆ. ಈ ತಿಂಗಳ 25 ಹಾಗೂ 26ರಂದು ನಡೆಯುವ ಕೃಷಿ ಸಮಿತಿ ತ್ರೈಮಾಸಿಕ ಸಭೆಗೆ ಈ ಕುರಿತ ಪ್ರಶ್ನೆಗಳನ್ನು ಇತರ ಸದಸ್ಯ ದೇಶಗಳ ಪ್ರತಿನಿಧಿಗಳು ಕೇಳಿದ್ದನ್ನು ಸೋಮವಾರ ಬಹಿರಂಗಪಡಿಸಲಾಗಿದೆ.

 ಕೃಷಿ ವಲಯಕ್ಕೆ ಮಾಡುವ ಪಾವತಿಯ ಗಾತ್ರ ಹಾಗೂ ಸ್ವರೂಪದ ಬಗ್ಗೆ ವಿಶ್ವ ವ್ಯಾಪಾರ ಸಂಸ್ಥೆ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಿರುವ ಹಿನ್ನೆಲೆಯಲ್ಲಿ ಹಲವು ಸದಸ್ಯ ದೇಶಗಳು ಪ್ರತಿಸ್ಪರ್ಧಿ ದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿವೆ. 62 ಪುಟಗಳಷ್ಟು ಪ್ರಶ್ನೆಗಳು ಬಂದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಕೆಲ ದೇಶಗಳು ಮನವಿ ಮಾಡಿದ್ದರೆ ಮತ್ತೆ ಕೆಲದೇಶಗಳು ಇದನ್ನು ಅಕ್ರಮ ನೆರವು ಎಂದು ಆಪಾದಿಸಿವೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತು ಭಾರತದಲ್ಲಿ ಮೋದಿ ಸರ್ಕಾರ ರೈತರ ಆದಾಯ ಹೆಚ್ಚಿಸುವುದನ್ನು ಆದ್ಯತೆಯಾಗಿ ಮಾಡಿಕೊಂಡಿವೆ. ಚೀನಾ ಜತೆಗಿನ ಸುಂಕ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮ ಕೈಗೊಂಡಿದ್ದರೆ, ಕೃಷಿ ಆದ್ಯತೆಯ ಆರ್ಥಿಕತೆಯಲ್ಲಿ ಆರ್ಥಿಕ ಪ್ರಗತಿ ಕುಂಠಿತಗೊಳ್ಳದಂತೆ ತಡೆಯಲು ಮೋದಿ ಸರ್ಕಾರ ರೈತರಿಗೆ ಉತ್ತೇಜನ ನೀಡುತ್ತಿದೆ.

ಭಾರತ ಕೃಷಿ ಕ್ಷೇತ್ರಕ್ಕಾಗಿ 357.5 ಶತಕೋಟಿ ಡಾಲರ್ ವೆಚ್ಚ ಮಾಡಲು ನಿರ್ಧರಿಸಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಯುರೋಪಿಯನ್ ಒಕ್ಕೂಟ ಕೋರಿದೆ. ರೈತರ ಆದಾಯವನ್ನು 2022ರೊಳಗೆ ದುಪ್ಪಟ್ಟುಗೊಳಿಸುವ ಭರವಸೆ ಬಗ್ಗೆಯೂ ಪ್ರಶ್ನಿಸಿದೆ.

"ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆ ಹಿನ್ನೆಲೆಯಲ್ಲಿ ಮತ್ತು ಅಧಿಕ ಉತ್ಪಾದನೆಯನ್ನು ತಡೆಯಲು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಇದನ್ನು ಹೇಗೆ ಮಾಡಲಾಗುತ್ತದೆ?" ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News