15 ಕಸ್ಟಮ್ಸ್ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಿದ ಕೇಂದ್ರ ಸರಕಾರ

Update: 2019-06-18 14:14 GMT

ಹೊಸದಿಲ್ಲಿ,ಜೂ.18: ಭ್ರಷ್ಟ ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಗದಾ ಪ್ರಹಾರ ಮುಂದುವರಿದಿದೆ. ಕ್ರಿಮಿನಲ್ ದುರ್ವರ್ತನೆಯ ವಿರುದ್ಧ ಕಠಿಣ ನಿಲುವು ತಳೆದಿರುವ ಕೇಂದ್ರವು ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವ ಆದಾಯ ತೆರಿಗೆ(ಐಟಿ) ಇಲಾಖೆಯ ಇನ್ನೂ 15 ಹಿರಿಯ ಅಧಿಕಾರಿಗಳನ್ನು ಮಂಗಳವಾರ ಕಡ್ಡಾಯವಾಗಿ ಸೇವೆಯಿಂದ ನಿವೃತ್ತಿಗೊಳಿಸಿದೆ. ಸರಕಾರವು ಬರೋಬ್ಬರಿ ಒಂದು ವಾರದ ಹಿಂದೆ ಭ್ರಷ್ಟಾಚಾರದ ಆರೋಪದಲ್ಲಿ ಐಟಿ ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ಮನೆಗೆ ಕಳುಹಿಸಿತ್ತು.

ಸರಕಾರವು ಹೊರಡಿಸಿರುವ ಹೇಳಿಕೆಯಲ್ಲಿ ಈ ಅಧಿಕಾರಿಗಳನ್ನು ಹೆಸರಿಸಲಾಗಿದ್ದು,ಅವರ ವಿರುದ್ಧದ ಆರೋಪಗಳನ್ನೂ ವಿವರಿಸಲಾಗಿದೆ. ಈ ಎಲ್ಲ ಅಧಿಕಾರಿಗಳು ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿಗೆ ಸೇರಿದವರಾಗಿದ್ದಾರೆ. ಈ ಪೈಕಿ 11 ಜನರು ತಮ್ಮ ವಿರುದ್ಧ ಸಿಬಿಐ ಪ್ರಕರಣಗಳನ್ನು ಹೊಂದಿದ್ದಾರೆ. ಇಬ್ಬರು ತಮ್ಮ ವಿರುದ್ಧ ಕಂದಾಯ ಇಲಾಖೆಯು ದಾಖಲಿಸಿರುವ ಪ್ರಕರಣಗಳ ಸರದಾರರಾಗಿದ್ದಾರೆ. ಈ ಎಲ್ಲ ಅಧಿಕಾರಿಗಳು ಆಯುಕ್ತರು ಅಥವಾ ಮೇಲಿನ ದರ್ಜೆಗಳಿಗೆ ಸೇರಿದವರಾಗಿದ್ದಾರೆ.

ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪ್ರಧಾನ ಆಯುಕ್ತ ಅನೂಪ್ ಶ್ರೀವಾಸ್ತವ ವಿರುದ್ಧ್ದ ಸಿಬಿಐ ದಾಖಲಿಸಿರುವ ಎರಡು ಪ್ರಕರಣಗಳಿವೆ. ಆಯುಕ್ತ ಅತುಲ ದೀಕ್ಷಿತ್ ಅವರೂ ತನ್ನ ವಿರುದ್ಧ ಎರಡು ಸಿಬಿಐ ಪ್ರಕರಣಗಳನ್ನು ಹೊಂದಿದ್ದಾರೆ.

ಸಂಸಾರ ಚಂದ್,ಜಿ.ಶ್ರೀಹರ್ಷ,ವಿನಯ ಬೃಜ್ ಸಿಂಗ್,ಅಶೋಕ ಆರ್.ಮಹಿದಾ,ವೀರೇಂದ್ರ ಅಗರ್ವಾಲ,ಅಮರೇಶ ಜೈನ್,ನಳಿನ ಕುಮಾರ,ಎಸ್.ಎಸ್.ಪಬನಾ,ಎಸ್.ಎಸ್.ಬಿಷ್ತ್,ವಿ.ಕೆ.ಸಂಗಾ,ರಾಜು ಶೇಖರ,ಎ.ಕೆ.ಅಸ್ವಾಲ್ ಮತ್ತು ಮುಹಮ್ಮದ್ ಅಲ್ತಾಫ್ ಅವರು ಪಟ್ಟಿಯಲ್ಲಿರುವ ಇತರ ಅಧಿಕಾರಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News