‘ಬೆತ್ತಲೆ ರಾಜ’ನನ್ನು ನೋಡಿ ನಗುವುದು ದೇಶದ್ರೋಹವೇ?

Update: 2019-06-19 06:04 GMT

ರಾಜಕಾರಣಿಗಳು ಅದೆಷ್ಟು ಲಜ್ಜೆಗೆಟ್ಟು ಹೋಗಿದ್ದಾರೆಂದರೆ, ಯಾವ ಟೀಕೆ, ದೂಷಣೆ, ಆಕ್ರೋಶಗಳು ಅವರ ದಪ್ಪ ಚರ್ಮವನ್ನು ತಟ್ಟುತ್ತಿಲ್ಲ. ಅವು ಸಂವೇದನೆಯನ್ನೇ ಕಳೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ಅವರನ್ನು ವ್ಯಂಗ್ಯವಲ್ಲದೆ ಇನ್ನಾವುದರಿಂದಲೂ ಚುಚ್ಚಲು ಸಾಧ್ಯವಿಲ್ಲ. ಬಹುಶಃ ಸದ್ಯದ ದಿನಗಳಲ್ಲಿ ಸರಕಾರ ಮತ್ತು ರಾಜಕಾರಣಿಗಳು ಈ ವ್ಯಂಗ್ಯಗಳ ವಿರುದ್ಧ ಈ ಕಾರಣಕ್ಕೇ ವ್ಯಗ್ರರಾಗಿದ್ದಾರೆ. ವ್ಯಂಗ್ಯವಾಡುವವರನ್ನು ಹುಡುಕಿ ಜೈಲಿಗೆ ತಳ್ಳುವ ಆಂದೋಲನವೊಂದು ಶುರುವಾಗಿದೆ. ಪ್ರಶಾಂತ್ ಕನೋಜಿಯಾ ಎಂಬ ಪತ್ರಕರ್ತರೊಬ್ಬರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದರು. ಅವರು ಎಸಗಿದ ಅಪರಾಧವಿಷ್ಟೆ. ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟನ್ನು ಹಂಚಿಕೊಳ್ಳುವ ಮೂಲಕ ಅವರು ಯೋಗಿ ಆದಿತ್ಯನಾಥರನ್ನು ಆಡಿಕೊಂಡು ನಕ್ಕರು. ಕನೋಜಿಯಾ ಅವರ ಟಿಪ್ಪಣಿಗಳನ್ನು ಒಳಗೊಂಡ ಹಾಗೂ ಆಕ್ಷೇಪಾರ್ಹ ಎಂದು ಭಾವಿಸಲಾದ ವೀಡಿಯೊ ಕ್ಲಿಪ್ ಒಂದನ್ನು ಹಂಚಿಕೊಂಡ ಅಪರಾಧಕ್ಕಾಗಿ ಎಷಿಕಾ ಸಿಂಗ್ ಮತ್ತು ಅನುಜ್ ಶುಕ್ಲಾ ಎಂಬ ಇನ್ನಿಬ್ಬರು ಪತ್ರಕರ್ತರ ಬಂಧನವಾಯಿತು. ಇದರೊಂದಿಗೆ ಈ ಪ್ರಕರಣವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯ ವಿಷಯವಾಗಿ ಬದಲಾಯಿತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆಯೆಂದು ವರದಿಗಳು ಹೇಳುತ್ತಿವೆ. ಈ ಪತ್ರಕರ್ತರ ಬಂಧನಗಳ ಸಂವಿಧಾನ ಬಾಹಿರ ಸ್ವರೂಪಗಳಿಂದಾಗಿ ದೇಶಾದ್ಯಂತ ಪತ್ರಕರ್ತರು ಬೀದಿಗಿಳಿದು ಬಂಧನಕ್ಕೊಳಗಾದ ಪತ್ರಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಕನೋಜಿಯಾ ವಿರುದ್ಧದ ಪ್ರಕರಣವನ್ನು ಗಟ್ಟಿಮಾಡಿಕೊಳ್ಳಲು ಉತ್ತರ ಪ್ರದೇಶದ ಪೊಲೀಸರು ಹಲವಾರು ಕಾನೂನು ಕಲಮುಗಳ ಅಸ್ತ್ರಗಳನ್ನು ಬಳಸಿದ್ದಾರೆ. ಅದರಲ್ಲಿ ಕ್ರಿಮಿನಲ್ ಮಾನಹಾನಿಯನ್ನು ಆರೋಪಿಸುವ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 500 ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯೆ ಸೆಕ್ಷನ್ 66 ಮುಖ್ಯವಾದವು. ನಂತರ ಸಾರ್ವಜನಿಕ ಕಿಡಿಗೇಡಿತನವನ್ನು ಆರೋಪಿಸುವ ಸೆಕ್ಷನ್ 505 ಅನ್ನು ಸಹ ಸೇರಿಸಲಾಯಿತು. ಲಕ್ನೋ ಪೊಲೀಸರು ಪ್ರದರ್ಶಿಸಿರುವ ಈ ಮಿತಿಮೀರಿದ ಅಧಿಕಾರ ದುರ್ಬಳಕೆಯು ಅಧಿಕಾರದಲ್ಲಿರುವವರನ್ನು ಯಾರೊಬ್ಬರೂ ಟೀಕಿಸಬಾರದೆಂಬ ಸ್ಥಿತಿಯು ಉದ್ಭವವಾಗುತ್ತಿರುವುದನ್ನು ಸೂಚಿಸುತ್ತದೆ. ಆದರೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಯಾವ ಕಾರಣಕ್ಕೂ ಚ್ಯುತಿ ಒದಗಬಾರದೆಂಬ ನೆಲೆಯಲ್ಲಿ ಸುಪ್ರೀಂ ಕೋರ್ಟು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ. ಇದರ ಪರಿಣಾಮವಾಗಿ ಕನೋಜಿಯಾ ಅವರು ಬಂಧನದಿಂದ ಬಿಡುಗಡೆಯಾಗಿದ್ದಾರೆ. ಅಧಿಕಾರದಲ್ಲಿರುವವರನ್ನು ಟೀಕಿಸಿದ್ದಕ್ಕಾಗಿ ದಂಡನೆಗೊಳಗಾದವರ ದೊಡ್ಡ ಪಟ್ಟಿಗೆ ಕನೋಜಿಯಾ ಮತ್ತು ಶರ್ಮಾ ಅವರದ್ದು ತೀರಾ ಇತ್ತೀಚಿನ ಸೇರ್ಪಡೆಯಷ್ಟೆ.

ಈ ಮೊದಲು ವ್ಯಂಗ್ರ ಚಿತ್ರಕಾರರು ಮತ್ತು ಹಾಸ್ಯವೃತ್ತಿಗರು (ಕಮೆಡಿಯನ್) ಮಾತ್ರ ಇಂತಹ ಶಿಕ್ಷೆಗೆ ಗುರಿಯಾಗುತ್ತಿದ್ದರು. ಆದರೆ ಸಾಮಾಜಿಕ ಜಾಲತಾಣಗಳು ಬಂದ ನಂತರ ಅಧಿಕಾರಸ್ಥರನ್ನು ಟೀಕಿಸುವ ಪೋಸ್ಟನ್ನು ಶೇರ್ ಮಾಡಿಕೊಳ್ಳುವುದೂ ಸಹ ಅಪರಾಧವಾಗುತ್ತಿದೆ. 2016ರಲ್ಲಿ ಭೂಪಾಲಿನಲ್ಲ್ಲಿ ಒಬ್ಬರು ಮೇಲ್ನೋಟಕ್ಕೆ ಆಕ್ಷೇಪಾರ್ಹ ಎಂದು ಕಂಡುಬರುತ್ತಿದ್ದ ಪೋಸ್ಟ್ ಒಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಒಬ್ಬ ಸಾಧಾರಣ ನಾಗರಿಕ ಒಬ್ಬ ರಾಜಕೀಯ ನಾಯಕರನ್ನು ವಿಡಂಬನೆ ಮಾಡುವಂಥ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಅದು ಭಿನ್ನಮತವನ್ನು ವ್ಯಕ್ತಪಡಿಸುವ ವಿಧಾನವೂ ಆಗಿರುವುದರಿಂದ ಆ ವ್ಯಕ್ತಿ ತನ್ನ ಆಲೋಚನೆಯ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಚಲಾಯಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಅಧಿಕಾರದಲ್ಲಿರುವವರ ಅಧಿಕಾರವು ಮಾನ್ಯವಾದುದೇ ಆಗಿದ್ದಲ್ಲಿ ಇಂತಹ ಪ್ರಕರಣಗಳು ಅಧಿಕಾರಸ್ಥರಿಂದ ಕರಾಳ ಪ್ರತಿಕ್ರಿಯೆಯನ್ನು ಏಕೆ ಪ್ರಚೋದಿಸಬೇಕು? ಇತಿಹಾಸದುದ್ದಕ್ಕೂ, ಅಧಿಕಾರಸ್ಥರನ್ನು ನೋಡಿ ಜನರು ನಗಾಡುವುದು ಅವರ ಅಹಮಿಗೆ ಘಾಸಿ ಮಾಡುತ್ತಲೇ ಬಂದಿದೆ.

ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್‌ಸನ್ ಅವರ ‘ಎಂಪರರ್ಸ್ ನ್ಯೂ ಕ್ಲಾಥ್ಸ್’ (ರಾಜನ ಹೊಸ ದಿರಿಸು) ಕಥೆಯು ನಿರೂಪಿಸುವಂತೆ ಪ್ರಜೆಗಳು ರಾಜನನ್ನು ನೋಡಿ ನಗಾಡುವಂತಿಲ್ಲ. ಏಕೆಂದರೆ ಸಾಮ್ರಾಟರು ನಗೆಚಟಾಕಿಗಳಿಗೆ ಮೀರಿದವರು. ಅಧಿಕಾರವು ವಿಡಂಬನೆಗಳಿಂದ ಅತೀತವಾದ ರಕ್ಷಣೆಯನ್ನು ಪಡೆದುಕೊಂಡಿರುತ್ತದೆ. ಅಧಿಕಾರಸ್ಥರು ಜನರ ಪರಿಹಾಸ್ಯಗಳಿಗೆ ಏಕೆ ಹೆದರುತ್ತಾರೆಂದರೆ ಅದು ಅವರಲ್ಲಿರುವ ಪೊಳ್ಳನ್ನು ಬಯಲು ಮಾಡುತ್ತದೆ. ಹಾಸ್ಯವು ಒಬ್ಬ ವ್ಯಕ್ತಿಯ ಘೋಷಿತ ವ್ಯಕ್ತಿತ್ವಕ್ಕೂ ಮತ್ತು ವಾಸ್ತವಿಕ ವ್ಯಕ್ತಿತ್ವಕ್ಕೂ ಇರುವ ವ್ಯತ್ಯಾಸವನ್ನು ಬೆಳಕಿಗೆ ತರುತ್ತದೆ. ಈ ಬೆಳಕಿಗೆ ಯಾರ ಮುಲಾಜೂ ಇರುವುದಿಲ್ಲವಾದ್ದರಿಂದ ಬಲಶಾಲಿಗಳನ್ನು ಕೆಳಗಿಳಿಸುವ ಶಕ್ತಿಯನ್ನು ಹೊಂದಿರುತ್ತದೆ. ಲಕ್ನೋ ಪೊಲೀಸರು ಹಾಸ್ಯದಲ್ಲಿರುವ ಶಕ್ತಿಯನ್ನು ಮನಗಂಡು ಕನೋಜಿಯಾ ಅವರ ಪೋಸ್ಟಿನ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿ ಅಧಿಕಾರವನ್ನು ಬಳಸಿದ್ದಾರೆಯೇ? ಇಂದಿನ ದಿನಮಾನಗಳಲ್ಲಿ ರಾಜಕೀಯ ವಾಗ್ವಾದಗಳಲ್ಲಿ ವಿಮರ್ಶೆಗೆ ಹೆಚ್ಚಿನ ಜಾಗವಿರುತ್ತಿಲ್ಲ.

ಭಿನ್ನಮತಕ್ಕಿರುವ ಅವಕಾಶಗಳು ಕುಗ್ಗುತ್ತಿದ್ದಂತೆ ಅಧಿಕಾರದ ದಮನಕಾರಿ ರಚನೆಗಳು ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತವೆ. ಈ ಪರಿಸ್ಥಿತಿಯಿಂದ ಹೊರಬರಬೇಕೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವವರು ಅಧಿಕಾರಸ್ಥರು ಹುಟ್ಟುಹಾಕಿರುವ ಮೌನವನ್ನು ಪರೋಕ್ಷವಾಗಿ ಭೇದಿಸುವ ರೀತಿಯಲ್ಲಿ ಹಾಸ್ಯವನ್ನು ಎಚ್ಚರಿಕೆಯಿಂದ ಮತ್ತು ವ್ಯೆಹಾತ್ಮಕವಾಗಿ ಬಳಸಬೇಕು. ಅಧಿಕಾರಗಳ ನಡುವೆ ಸಮತೋಲನವನ್ನು ಉಂಟುಮಾಡುವ ಹಾಸ್ಯದ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಾ 1997ರಲ್ಲಿ ಸ್ಟೀವನ್ ಪಿಂಕರ್ ಅವರು ಹೀಗೆ ಹೇಳಿದ್ದಾರೆ: ಬಿಡಿಬಿಡಿ ವ್ಯಕ್ತಿಗಳಲ್ಲಿ ಚದುರಿದಂತೆ ಹುಟ್ಟಿಕೊಳ್ಳುವ ವ್ಯಂಗ್ಯದ ನಗುಗಳು ಒಂದು ನ್ಯೂಕ್ಲಿಯರ್ ಪ್ರತಿಕ್ರಿಯಾತ್ಮಕ ಸರಣಿಯಂತೆ ಹರಡುತ್ತಾ ಹರಡುತ್ತಾ ಒಂದು ದೊಡ್ಡ ವಿಡಂಬನೆಯ ಕೋರಸ್ಸಾಗಿ ಬದಲಾಗುತ್ತಿದ್ದಂತೆ ತಮ್ಮ ಶತ್ರುವಿನಲ್ಲಿರುವ ಕಾಯಿಲೆಯನ್ನು ಜನರೆಲ್ಲರೂ ಅರ್ಥಮಾಡಿಕೊಂಡಿದ್ದಾರೆಂಬುದನ್ನು ರುಜುವಾತುಮಾಡುತ್ತದೆ. ಶತ್ರುವನ್ನು ಏಕಾಂಗಿಯಾಗಿ ಹೀಯಾಳಿಸುವ ವ್ಯಕ್ತಿಯು ಶತ್ರುವಿನ ದಾಳಿಗೆ ಬಲಿಯಾಗುವ ಅಪಾಯವನ್ನು ಎದುರಿಸಬೇಕಾಗುತ್ತದೆ. ಆದರೆ ಒಂದು ರಹಸ್ಯ ಮೈತ್ರಿಯ ಸ್ವರೂಪದಲ್ಲಿ ಜನರೆಲ್ಲರೂ ತಮ್ಮ ಶತ್ರುವಿನ ದೌರ್ಬಲ್ಯವನ್ನು ತಮ್ಮ ಸಾಮೂಹಿಕ ನಗುವಿನ ಮೂಲಕವೇ ಬಯಲುಗೊಳಿಸುವಾಗ ಆ ಅಪಾಯವಿರುವುದಿಲ್ಲ.

ಸದ್ಯದ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಸ್ವರ್ಗದ ಬಟ್ಟೆಯನ್ನು ಉಟ್ಟ ಬೆತ್ತಲೆ ರಾಜನ ಕಥೆೆ ನೆನಪಾಗುತ್ತದೆ. ರಾಜನೊಬ್ಬನಿಗೆ ವ್ಯಾಪಾರಿಯೊಬ್ಬ ಸ್ವರ್ಗದ ಬಟ್ಟೆಯನ್ನು ಮಾರುತ್ತಾನೆ. ‘‘ದೇಶಭಕ್ತರಿಗೆ ಮತ್ತು ಸಜ್ಜನರಿಗೆ ಮಾತ್ರ ಆ ಬಟ್ಟೆ ಕಾಣುತ್ತದೆ’’ ಎಂದೂ ಹೇಳುತ್ತಾನೆ. ಮತ್ತು ರಾಜನಿಗೆ ಅದನ್ನು ಉಡಿಸುತ್ತಾನೆ. ರಾಜ ಬೆತ್ತಲೆ ನಿಂತಿದ್ದರೂ ಮಂತ್ರಿ ಮಾಗಧರು ಆತ ಧರಿಸಿದ ಬಟ್ಟೆಯನ್ನು ಹಾಡಿ ಹೊಗಳತೊಡಗುತ್ತಾರೆ. ಸ್ವರ್ಗದ ಬಟ್ಟೆಯನ್ನು ಧರಿಸಿದ ರಾಜ, ರಾಜಬೀದಿಯಲ್ಲಿ ಮೆರವಣಿಗೆ ಹೋಗುತ್ತಾನೆ. ರಾಜ ಬೆತ್ತಲೆಯಾಗಿದ್ದಾನೆ. ಆದರೆ ನಾಗರಿಕರು ಒಳಗೊಳಗೆ ನಗುತ್ತಾ ಬಟ್ಟೆಯನ್ನು ಹೊಗಳುತ್ತಿದ್ದಾರೆ. ಆಗ ಅಲ್ಲೇ ಇದ್ದ ಮಗುವೊಂದು ‘‘ಹೇ ಬೆತ್ತಲೆ ರಾಜ’’ ಎಂದು ಜೋರಾಗಿ ನಗುತ್ತದೆ. ತಕ್ಷಣ ಆ ಮಗುವನ್ನು ದೇಶದ್ರೋಹಿ ಕಾಯ್ದೆಯಲ್ಲಿ ಬಂಧಿಸಲಾಗುತ್ತದೆ. ಸದ್ಯಕ್ಕೆ ಭಾರತದಲ್ಲಿ ನಡೆಯುತ್ತಿರುವುದು ಇದೇ ಅಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News