ರೌಡಿ ಶೀಟರ್ ಗೋವಿಂದ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಸೇರಿ ಮೂವರು ಸಹೋದರರ ಬಂಧನ

Update: 2019-06-18 18:43 GMT

ಶಿವಮೊಗ್ಗ, ಜೂ. 18: ರೌಡಿ ಶೀಟರ್ ಗೋವಿಂದನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಮೂವರು ಸಹೋದರರನ್ನು ನಗರದ ದೊಡ್ಡಪೇಟೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖ್ಯ ಆರೋಪಿ ಸೀತಾರಾಮ ಯಾನೆ ಖರಾಬ್ ಶಿವು, ಈತನ ಸಹೋದರರಾದ ನಾಗರಾಜ್ ಯಾನೆ ನಾಗಿ ಹಾಗೂ ಸುಬ್ರಹ್ಮಣ್ಯ ಯಾನೆ ಸುಬ್ಬು ಬಂಧಿತರೆಂದು ಗುರುತಿಸಲಾಗಿದೆ. ಘಟನೆ ನಡೆದ ಬಳಿಕ ಈ ಮೂವರು ಮುಖ್ಯ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಬೆನ್ನುಬಿದ್ದಿದ್ದ ಪೊಲೀಸರು, ನಾಲ್ಕು ತಿಂಗಳ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಈಗಾಗಲೇ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತರೆ ಆರೋಪಿಗಳಾದ ಚೇತನ್, ಸಂಜಯ್, ಮಂಜುನಾಥ್, ರಿಜ್ವಾನ್, ಸಂದೇಶ, ಪ್ರೇಮರಾಜ್, ಶಿವರಾಜ್, ಲಕ್ಷ್ಮಮ್ಮ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆ ಹಿನ್ನೆಲೆ: ಕಳೆದ ಜನವರಿ 30 ರಂದು ರೌಡಿ ಶೀಟರ್ ಗೋವಿಂದ ಎಂಬಾತನನ್ನು ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಖರಾಬ್ ಶಿವು ಹಾಗೂ ಇತರರು ಗಾರ್ಡನ್ ಏರಿಯಾ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಘಟನೆಯ ನಂತರ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದರು. 

ರೌಡಿ ಶೀಟರ್ ಮಾರ್ಕೆಟ್ ಗಿರಿ ಹತ್ಯೆ ಪ್ರಕರಣದಲ್ಲಿ, ಗೋವಿಂದ ಹಾಗೂ ಆತನ ಸಹೋದರ ಮಾರ್ಕೆಟ್ ಲೋಕಿ ಆರೋಪಿಗಳಾಗಿದ್ದರು. ಘಟನೆಯ ನಂತರ ಇಬ್ಬರು ತಲೆಮರೆಸಿಕೊಂಡಿದ್ದರು. ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಖರಾಬ್ ಶಿವು ತಂಡ ಸಂಚು ನಡೆಸಿತ್ತು. 

ಕಳೆದ ಜನವರಿ 30 ರಂದು ಗೋವಿಂದನು ಅತ್ಯಂತ ಗುಪ್ತವಾಗಿ ಬೈಕ್‍ನಲ್ಲಿ ತನ್ನ ಮನೆಗೆ ಆಗಮಿಸಿ ಹಿಂದಿರುಗುವಾಗ, ಮಾಹಿತಿ ಅರಿತ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಆಪಾದನೆ ಕೇಳಿಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News