ವಿದ್ಯುತ್ ಶಾಕ್: ಯುವಕನಿಗೆ ಗಂಭೀರ ಗಾಯ

Update: 2019-06-18 18:45 GMT

ಶಿವಮೊಗ್ಗ, ಜೂ. 18: ಡಿಶ್ ಕೇಬಲ್ ಬದಲಾಯಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಲೈನ್ ತಾಗಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಎಸ್.ಎನ್.ನಗರದಲ್ಲಿ ನಡೆದಿದೆ. 

ಫೈಜಾನ್ (18) ಗಂಭೀರವಾಗಿ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ. ಆತನ ಎರಡು ಕೈ, ತುಟಿ ಹಾಗೂ ಕುತ್ತಿಗೆ ಭಾಗ ಸುಟ್ಟು ಹೋಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಿತಿ ಚಿಂತಾಜನಕವಾಗಿದೆ. 

ಘಟನೆ ಹಿನ್ನೆಲೆ: ಎಸ್.ಎನ್.ನಗರ ಏರಿಯಾ ಸುತ್ತಮುತ್ತ ಡಿಶ್ ಬರುತ್ತಿರಲಿಲ್ಲ. ಈ ಬಗ್ಗೆ ಕೇಬಲ್ ಆಪರೇಟರ್ ಗೆ ನಿವಾಸಿಗಳು ಮಾಹಿತಿ ನೀಡಿದ್ದರು. ಅದರಂತೆ ಆಪರೇಟರ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು, ಈ ವೇಳೆ ಜಂಕ್ಷನ್ ಬಾಕ್ಸ್ ವೊಂದರ ಬಳಿ ಸಮಸ್ಯೆಯಿರುವುದು ಕಂಡುಬಂದಿತ್ತು.

ಜಂಕ್ಷನ್ ಬಾಕ್ಸ್ ಎತ್ತರದ ಸ್ಥಳದಲ್ಲಿದ್ದು, ಮೇಲೆ ಹತ್ತಲು ಏಣಿಯಿರಲಿಲ್ಲ. ಅಲ್ಲಿಯೇ ಇದ್ದ ಫೈಜಾನ್‍ನನ್ನು ಕರೆತಂದ ಆಪರೇಟರ್, ಆತನ ಮೂಲಕ ಜಂಕ್ಷನ್ ಬಾಕ್ಸ್ ಇದ್ದ ಸ್ಥಳ ಹತ್ತಿಸಿದ್ದಾನೆ. ಈ ವೇಳೆ ಸಮೀಪದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ಲೈನ್ ತಗುಲಿದೆ. ಶಾಕ್‍ನಿಂದ ಫೈಜಾನ್ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾನೆ. 

ತಕ್ಷಣವೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ನಂತರ ಕೇಬಲ್ ಆಪರೇಟರ್ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News