ಆಮೆಗತಿಯ ಮುಂಗಾರು ಮಾರುತ: ಈ ಬಾರಿ ಹೀಗೇಕೆ ಗೊತ್ತೇ ?

Update: 2019-06-19 03:46 GMT

ಹೊಸದಿಲ್ಲಿ: ಈ ಬಾರಿ ವಿಳಂಬವಾಗಿಯೇ ಆರಂಭವಾದ ಮುಂಗಾರು ಮಾರುತಕ್ಕೆ ವಾಯು ಚಂಡಮಾರುತವೂ ತಡೆಯಾಗಿ ಪರಿಣಮಿಸಿದೆ. ಇದರಿಂದಾಗಿ ಮುಂಗಾರು ತೀರಾ ನಿಧಾನವಾಗಿ ಪ್ರಗತಿ ಕಾಣುತ್ತಿದ್ದು, 12 ವರ್ಷಗಳಲ್ಲೇ ಅತ್ಯಂತ ನಿಧಾನ ಪ್ರಗತಿ ಇದಾಗಿದೆ ಎನ್ನುವುದು ಹವಾಮಾನ ಇಲಾಖೆ ಅಂಕಿ ಅಂಶಗಳಿಂದ ತಿಳಿಯುತ್ತದೆ.

ಸಾಮಾನ್ಯವಾಗಿ ಪ್ರತಿ ವರ್ಷ ಈ ವೇಳೆಗೆ ದೇಶದ ಮೂರನೇ ಎರಡರಷ್ಟು ಪ್ರದೇಶಕ್ಕೆ ಮುಂಗಾರು ಮಳೆ ಸಿಂಚನವಾಗುತ್ತದೆ. ಆದರೆ ಪ್ರಸಕ್ತ ವರ್ಷ ಮುಂಗಾರು, ದೇಶದ 10-15% ಭಾಗವನ್ನಷ್ಟೇ ತಲುಪಿದೆ.

ಮುಂಗಾರು ಆಮೆಗತಿಯಲ್ಲಿ ಸಾಗಿರುವುದರಿಂದ ಪ್ರಸ್ತುತ ದೇಶದಲ್ಲಿ ಶೇಕಡ 44ರಷ್ಟು ಮಳೆಕೊರತೆ ಕಾಣಿಸಿಕೊಂಡಿದೆ. ಮುಂಗಾರು ಇದೀಗ ಕೇರಳ, ದಕ್ಷಿಣ ಕರ್ನಾಟಕದ ಕೆಲ ಭಾಗ, ತಮಿಳುನಾಡಿನ ಮೂರನೇ ಎರಡು ಭಾಗ ಮತ್ತು ಈಶಾನ್ಯ ಭಾರತವನ್ನಷ್ಟೇ ವ್ಯಾಪಿಸಿದೆ. ಇದೀಗ ಮುಂಗಾರು ಮಾರುತ ಮುನ್ನಡೆಯುವ ಹಂತಕ್ಕೆ ಬಂದಿದ್ದು, ಇನ್ನಷ್ಟು ಬಲವಾಗಲು ಒಂದು ವಾರ ಕಾಲ ಬೇಕಾಗಬಹುದು ಎನ್ನುವುದು ಹವಾಮಾನ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

"ಮುಂಗಾರು ಮಾರುತ ಎರಡು ಮೂರು ದಿನಗಳಲ್ಲಿ ಕೊಂಕಣ ಕರಾವಳಿ ತಲುಪಿಲಿದೆ. ಜೂನ್ 25ರ ವೇಳೆಗೆ ಇಡೀ ಮಹಾರಾಷ್ಟ್ರವನ್ನು ವ್ಯಾಪಿಸಲಿದೆ. ಜೂನ್ ಕೊನೆಯ ವೇಳೆಗೆ ಕೇಂದ್ರಭಾರತವನ್ನು ಮುಂಗಾರು ತಲುಪಿದ್ದು, ವಾಡಿಕೆಗಿಂತ 15 ದಿನ ವಿಳಂಬವಾಗುತ್ತಿದೆ" ಎಂದು ಹವಾಮಾನ ಇಲಾಖೆಯ ಪ್ರಧಾನ ಮುಂಗಾರು ಮುನ್ಸೂಚಕ ಡಿ.ಶಿವಾನಂದ ಪೈ ಹೇಳಿದ್ದಾರೆ.

ತೀವ್ರ ನೀರಿನ ಅಭಾವದಿಂದ ಕಂಗೆಟ್ಟಿರುವ ಮಹಾರಾಷ್ಟ್ರ, ತಮಿಳುನಾಡು, ದಕ್ಷಿಣ ಭಾರತ ಹಾಗೂ ಕೇಂದ್ರ ಭಾರತದ ಹಲವು ಪ್ರದೇಶಗಳು ಮುಂಗಾರು ಆಗಮನಕ್ಕಾಗಿ ಕಾಯುತ್ತಿವೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ತೀರಾ ಕುಸಿದಿದ್ದು, ಒಟ್ಟು ಸಾಮರ್ಥ್ಯದ ಶೇಕಡ 10ಕ್ಕಿಂತಲೂ ಕಡಿಮೆ ಇದೆ.

ಈ ಹಿಂದಿನ ವರ್ಷಗಳಲ್ಲಿ 2007ರಲ್ಲಿ ಮುಂಗಾರು ಅತ್ಯಂತ ಕನಿಷ್ಠ ಪ್ರಗತಿ ದಾಖಲಾಗಿತ್ತು. ಕೇದಾರನಾಥ ಪ್ರಳಯ ಸಂಭವಿಸಿದ 2013ರಲ್ಲಿ ಮುಂಗಾರು ಅತ್ಯಂತ ವೇಗದ ಪ್ರಗತಿ ದಾಖಲಿಸಿದ್ದು, ಜೂನ್ 16ರ ವೇಳೆಗೆ ಅಂದರೆ ವಾಡಿಕೆಗಿಂತ ಒಂದು ತಿಂಗಳು ಮುಂಚಿತವಾಗಿಯೇ ಇಡೀ ದೇಶವನ್ನು ವ್ಯಾಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News