ಜತ್ರೋಪ ಬೀಜ ಸೇವಿಸಿ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ

Update: 2019-06-19 11:59 GMT

ಶಿವಮೊಗ್ಗ, ಜೂ.19: ಜಿಲ್ಲೆಯ ಸೊರಬ ತಾಲೂಕು ಕುಪ್ಪಗಡ್ಡೆ ಗ್ರಾಮದ ಶಾರದಾ ವಿದ್ಯಾಮಂದಿರದ 9 ವಿದ್ಯಾರ್ಥಿಗಳು ಜತ್ರೋಪ ಬೀಜ ಸೇವಿಸಿ ಅಸ್ವಸ್ಥಗೊಂಡ ಘಟನೆ ಮಂಗಳವಾರ ನಡೆದಿದೆ.

ಅನನ್ಯ, ಅರ್ಪಿತಾ, ಸಿಂಚನಾ ರಾಹುಲ್, ಪೃಥ್ವಿ ಸೃಜನ್, ಶ್ರೀಹರಿ ಸೇರಿ 9 ವಿದ್ಯಾರ್ಥಿಗಳು ಬೀಜ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಆಸ್ಪತ್ರೆಯಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲ ವಿದ್ಯಾರ್ಥಿಗಳನ್ನು ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನೆ ಹಿನ್ನೆಲೆ: ಶಾಲೆಯಲ್ಲಿ ಆಟವಾಡಲು ಬಿಟ್ಟ ವೇಳೆ ಮೈದಾನದಲ್ಲಿದ್ದ ಜತ್ರೋಪ ಬೀಜವನ್ನ ಮಕ್ಕಳು ಸೇವಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ತಕ್ಷಣವೇ ಶಾಲೆಯ ಶಿಕ್ಷಕರು ಅಸ್ವಸ್ಥ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅವರನ್ನು ಶಿವಮೊಗ್ಗದ ಮೆಗ್ಗಾನ್‍ಗೆ ಸೇರಿಸಲಾಗಿದೆ.

ಈ ಕುರಿತಂತೆ ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಶಂಕರಪ್ಪರವರು ಮಾತನಾಡಿ, 'ಪ್ರಸ್ತುತ ವಿದ್ಯಾರ್ಥಿಗಳೆಲ್ಲರೂ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ' ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News