ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಸ್ಪಂದಿಸಿ: ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ

Update: 2019-06-19 12:11 GMT

ಚಿಕ್ಕಮಗಳೂರು, ಜೂ.19: ಜಿಲ್ಲೆಯಲ್ಲಿ ಹಲವೆಡೆ ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಕುಡಿಯುವ ನೀರಿನ ಯೋಜನೆಗಾಗಿ 16 ಕೋಟಿ ರೂ. ಅಂದಾಜು ತಯಾರಿಸಲಾಗಿದ್ದು, ಈಗಾಗಲೇ ಅನುದಾನ ಬಂದಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ತರಿಸಲಾಗಿರುವ ಸಮಸ್ಯೆಗಳ ಅಂದಾಜು ಪಟ್ಟಿಯಲ್ಲಿ ಹಲವು ನ್ಯೂನ್ಯತೆಗಳಿವೆ. ಅವುಗಳನ್ನು ಪರಿಶೀಲಿಸಿ ಆಯಾ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರ ಗಮನಕ್ಕೆ ತಂದು ಚರ್ಚಿಸಿ ಅಗತ್ಯವಿರುವ ಹಾಗೂ ತುರ್ತು ಸಮಸ್ಯೆಗಳಿರುವ ಗ್ರಾಮಗಳಿಗೆ ಆದ್ಯತೆ ನೀಡಿ ಗ್ರಾಮಗಳ ಪಟ್ಟಿಯನ್ನು ತಯಾರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಸದಸ್ಯರುಗಳ ಒಟ್ಟಾರೆ ಅಭಿಪ್ರಾಯದಂತೆ ಈ ರೀತಿಯ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದರು. 

ಪರಿಶಿಷ್ಟ ಜಾತಿ-ಪಂಗಡ ಸಮುದಾಯ ವರ್ಗದವರಿಗೆ ಶೇ.40 ರಷ್ಟು ಮೀಸಲಿಟ್ಟಿರುವ ಅನುದಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ಕುಡಿಯುವ ನೀರಿಗೆ ಯಾವುದೇ ತಾರತಮ್ಯ ಆಗದ ರೀತಿಯಲ್ಲಿ ಸಮಸ್ಯೆ ನಿವಾರಣೆಯಾಗಬೇಕು. ಅಧಿಕಾರಿಗಳು ಖುದ್ದು ಪರಿಶೀಲಿಸಿ ಆದ್ಯತೆ ನೀಡಬೇಕು ಎಂದರು. ಲಕ್ಯಾ ಕ್ಷೇತ್ರ ತೀವ್ರ ಬರಗಾಲದಿಂದ ಕೂಡಿದ್ದು, ಇಂತಹ ಕ್ಷೇತ್ರಕ್ಕೆ ಬರೀ ಐದು ಬೋರ್ ವೆಲ್ ಕಾಮಗಾರಿಗಳಿಗೆ ಅನುಮೋದನೆ ನೀಡಿರುವುದು ಸಮರ್ಪಕವಲ್ಲ. ಆದ್ದರಿಂದ ಅದನ್ನು ಮರು ಪರಿಶೀಲಿಸಿ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಬೆಳವಾಡಿ ರವೀಂದ್ರ ಅವರು ಸಭೆಯ ಗಮನಕ್ಕೆ ತಂದರು.

ಸ್ವಚ್ಛ ಮೇವ ಜನತೆ ಆಂದೋಲನದ ಅಡಿಯಲ್ಲಿ ಪ್ರತಿ ಗ್ರಾಮಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಗ್ರಾಮ ಪಂಚಾಯತ್ ಹಂತದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಹಾಗೂ ಸ್ವಚ್ಛ ಮೇವ ಜನತೆ ಆಂದೋಲನ ಕುರಿತು ರಾಜ್ಯ ಮಟ್ಟದ ಕನ್ನಡ ಹಾಗೂ ಆಂಗ್ಲ ಭಾಷೆಯ ದಿನಪತ್ರಿಕೆಗಳಲ್ಲಿ ವ್ಯಾಪಕ ಜಾಹೀರಾತು ಪ್ರಕಟಿಸಲಾಗುವುದು ಎಂದು ಸ್ವಚ್ಛ ಭಾರತ ಆಂದೋಲನದ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ, ಸಭೆಯ ಉದ್ದೇಶ ಮತ್ತು ನೀರು ಸರಬರಾಜು ಮಾಡುವ ಕುರಿತು ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ಸಮಸ್ಯೆ ಇರುವ ಕ್ಷೇತ್ರಗಳಿಗೆ ಸೌಲಭ್ಯ ಒದಗಿಸಬೇಕು. ಜಿಲ್ಲಾ ಪಂಚಾಯತ್ ಸದಸ್ಯರು ನೀಡಿದ ಸಮಸ್ಯೆಗಳ ಪಟ್ಟಿಯನ್ನು ಕೂಲಂಕಶವಾಗಿ ಪರಿಶೀಲಿಸಿ, ಪರಿಹರಿಸುವಂತಹ ಕಾರ್ಯವನ್ನು ಅತೀ ಶೀಘ್ರದಲ್ಲಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ಎಸ್.ಅಶ್ವತಿ ಮಾತನಾಡಿ, ಕುಡಿಯುವ ನೀರಿಗಾಗಿ 16 ಲಕ್ಷ ರೂ. ಸರಕಾರದಿಂದ ಅನುದಾನ ಬಂದಿದ್ದು, ಯಾವ ಕಡೆ ಅತೀ ಹೆಚ್ಚು ನೀರಿಗಾಗಿ ಸಮಸ್ಯೆ ಇದೆಯೋ ಅಂತಹ ಗ್ರಾಮಗಳನ್ನು ಪರಿಶೀಲಿಸಿ ಯಾವುದೇ ಪಕ್ಷಪಾತವಿಲ್ಲದೇ ಸಮಸ್ಯೆ ಪರಿಹರಿಸುತ್ತೇವೆ. ಜಿಲ್ಲಾ ಪಂಚಾಯತ್ ಸದಸ್ಯರು ನೀಡುವ ಕ್ಷೇತ್ರವಾರು ಸಮಸ್ಯೆ ಪಟ್ಟಿಯನ್ನು ಶೀಘ್ರವಾಗಿ ಪರಿಶೀಲಿಸಿ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು.

ಗ್ರಾಮೀಣ ನೀರು ನೈರ್ಮಲ್ಯ, ಕಾರ್ಯಪಾಲಕ ಅಭಿಯಂತರಾದ ಶಿವಕುಮಾರ್ ಇದಕ್ಕೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ಹಿರಿಗಯ್ಯ, ಕವಿತ ಲಿಂಗರಾಜು, ಜಸಿಂತಾ ಅನಿಲ್‍ಕುಮಾರ್,ಸದಸ್ಯರಾದ ಮಹೇಶ್ ಒಡೆಯರ್, ಸೋಮಶೇಖರ್, ನಿಖಿಲ್ ಚಕ್ರವರ್ತಿ ಹಾಗೂ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News