ಬ್ರಾಹ್ಮಣವಾದ ಅಲ್ಪಸಂಖ್ಯಾತರಿಗೆ ಅಪಾಯಕಾರಿ: ಚಿಂತಕ ಶಹರಿಯಾರ್ ಖಾನ್

Update: 2019-06-19 18:31 GMT

ಚಿಕ್ಕಮಗಳೂರು, ಜೂ.19: ದೇಶದಲ್ಲಿ ಇಸ್ಲಾಂ ಧರ್ಮಕ್ಕೆ ಅಪಾಯವಿಲ್ಲ. ನೈಜ ಹಿಂದೂ ಧರ್ಮವೇ ಇಸ್ಲಾಂ ಧರ್ಮವನ್ನು ಪೋಷಿಸಿಕೊಂಡು ಬಂದಿದೆ. ಆದರೆ ದೇಶದಲ್ಲಿ ಮುಸ್ಲಿಮರಿಗೆ ಅಪಾರ ಎದುರಾಗಿದ್ದು, ಅಂಬೇಡ್ಕರ್ ಸಂವಿಧಾನ ಮಾತ್ರ ಮುಸ್ಲಿಮರ ರಕ್ಷಣೆ ಮಾಡುತ್ತಿದೆ. ಸಂವಿಧಾನದ ರಕ್ಷಣೆಗಾಗಿ ದಲಿತರು, ಹಿಂದುಳಿದ ಶೋಷಿತ ಸಮುದಾಯಗಳೊಂದಿಗೆ ಅಲ್ಪಸಂಖ್ಯಾತರೂ ಒಗ್ಗೂಡಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಾಹಿತಿ ಹಾಗೂ ಚಿಂತಕ ಬೆಂಗಳೂರಿನ ಶಹರಿಯಾರ್ ಖಾನ್ ಅಭಿಪ್ರಾಯಿಸಿದ್ದಾರೆ.

ಬುಧವಾರ ನಗರದ ಕುಂವೆಂಪು ಕಲಾಮಂದಿರದಲ್ಲಿ ಸಂವಿಧಾನ ಉಳಿಸಿ ಹೋರಾಟ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಅಂಬೇಡ್ಕರ್ ಜನ್ಮದಿನಾಚರಣೆ ಹಾಗೂ ಅಂಬೇಡ್ಕರ್ ಚಿಂತನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ದೇಶ ವಿವಿಧ ಧರ್ಮ, ಜಾತಿ, ಮತಗಳ ಬೀಡಾಗಿದ್ದರೂ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶದವಾಗಿದೆ. ಇಂತಹ ದೇಶಕ್ಕೆ ಪ್ರಸಕ್ತ ಬ್ರಾಹ್ಮಣವಾದ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ದೇಶದಲ್ಲಿ ಇಸ್ಲಾಂ ಧರ್ಮವನ್ನು ಅನಾದಿಕಾಲದಿಂದಲೂ ಹಿಂದೂ ಧರ್ಮವೇ ರಕ್ಷಣೆ ನೀಡುತ್ತಿದೆ. ಆದರೆ ಮುಸ್ಲಿಮರ ಪಾಲಿಗೆ ಬ್ರಾಹ್ಮಣವಾದ ಅಪಾಯಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನ ಮುಸ್ಲಿಮರಿಗೆ ರಕ್ಷಣೆ ನೀಡುತ್ತಿದೆ ಎಂದ ಅವರು, ದೇಶಕ್ಕೆ ಯಾವುದೇ ಧರ್ಮದ ಕಾನೂನು ಸರ್ವಶ್ರೇಷ್ಟವಲ್ಲ, ಸಂವಿಧಾನಾತ್ಮಕ ಕಾನೂನೇ ಪರಮಶ್ರೇಷ್ಟವಾಗಿದೆ. ಇಂತಹ ಸಂವಿಧಾನದ ವಿರುದ್ಧ ಬ್ರಾಹ್ಮಣವಾದ ಷಡ್ಯಂತ್ರ ರೂಪಿಸುತ್ತಿದ್ದು, ಇದರ ವಿರುದ್ಧ ದಲಿತರು-ಅಲ್ಪಸಂಖ್ಯಾತರು ಒಗ್ಗೂಡಿ ಹೋರಾಟಕ್ಕಿಳಿಬೇಕಿದೆ ಎಂದು ಅವರು ಕರೆ ನೀಡಿದರು.

ಧರ್ಮಗಳು ಸಮಾಜದ ಶಾಂತಿಗಾಗಿ, ಮನುಷ್ಯನ ನೆಮ್ಮದಿ, ಆತ್ಮಶಾಂತಿಗಾಗಿ ಇವೆ. ಆದರೆ ಧರ್ಮ ದೇಶದ ಆಡಳಿತ ನಡೆಸುವಂತಾಗಬಾರದು. ಧರ್ಮಾಧರಿತ ರಾಜಕಾರಣದಿಂಧ ಅಪಾಯ ಕಟ್ಟಿಟ್ಟಬುತ್ತಿ ಎಂದ ಅವರು, ಅಲ್ಪಸಂಖ್ಯಾತರಿಗೆ ಪ್ರಸಕ್ತ ಜಾತ್ಯತೀತ ಪಕ್ಷಗಳೂ ನ್ಯಾಯ ಒದಗಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಸ್ವಲ್ಪವಾದರೂ ನ್ಯಾಯ ಸಿಕ್ಕಿದೆ ಎನ್ನುವುದಾದರೆ ಅದಕ್ಕೆ ಕಾರಣ ಅಂಬೇಡ್ಕರ್ ಬರೆದಿರುವ ಸಂವಿಧಾನ ಎಂದರು.

ಖ್ಯಾತ ವಕೀಲ, ಚಿಂತಕ ಅನಂತ್ ನಾಯಕ್ ಮಾತನಾಡಿ, ಅಂಬೇಡ್ಕರ್ ರನ್ನು ಜಾತಿಗೆ ಸೀಮಿತಗೊಳಿಸಿ ಸಂವಿಧಾನವನ್ನು ಬರೆದಿರುವವರು ಅಂಬೇಡ್ಕರ್ ಓಬ್ಬರೆ ಅಲ್ಲ ಎಂಬ ಸುಳ್ಳನ್ನು ಸತ್ಯ ಮಾಡುವ ಹುನ್ನಾರ ಕೋಮುವಾದಿಗಳಿಂದ ನಡೆಯುತ್ತಿದೆ. ಸಂವಿಧಾನ ಬರೆದಿರುವವರು ಅಂಬೇಡ್ಕರ್ ಎಂಬುದಕ್ಕೆ ದಾಖಲೆಗಳಿವೆ. ಸಂವಿಧಾನದ ಕರುಡು ಸಮಿತಿ ಸದಸ್ಯರೇ ಅಂಬೇಡ್ಕರ್ ಅವರ ಪರಿಶ್ರಮವನ್ನು ಕೊಂಡಾಡಿರುವ ಉಲ್ಲೇಖಗಳು ಲಭ್ಯವಿದೆ ಎಂದ ಅವರು, ಇಂತಹ ಅಪಪ್ರಚಾರಗಳ ಮೂಲಕ ಅಂಬೇಡ್ಕರ್ ಅವರ ಸಾಧನೆ, ಪರಿಶ್ರಮವನ್ನು ನಗಣ್ಯ ಮಾಡುವ ಹುನ್ನಾರ ನಡೆಯುತ್ತಿದ್ದು, ಇದಕ್ಕೆ ಸಮರ್ಥ ಪ್ರತ್ಯುತ್ತರ ನೀಡುವ ಅಗತ್ಯವಿದೆ ಎಂದರು.

ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸಂವಿಧಾನ ರಚನೆ ಮಾಡಿಲ್ಲ. ದೇಶದ ಎಲ್ಲ ವರ್ಗಗಳ ಏಳಿಗೆಗಾಗಿ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ರಚನೆ ಮಾಡಿದ್ದಾರೆ. ಶೋಷಿತರು, ಹಿಂದುಳಿದ ವರ್ಗದವರಲ್ಲದೇ ಮಹಿಳೆಯರು, ಕಾರ್ಮಿಕರು, ರೈತರೂ ಸೇರಿದಂತೆ ದೇಶದ ಆರ್ಥಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಆದರೆ ಅವರ ಈ ಕೊಡುಗೆಗಳನ್ನು ಜನರಿಂದ ಮುಚ್ಚಿಡುವ ಹುನ್ನಾರ ನಡೆಯುತ್ತಿದೆ ಎಂದರು.

ಪ್ರಸಕ್ತ ದೇಶದಲ್ಲಿ ಮನುವಾದದ ಮರು ಸ್ಥಾಪನೆಗಾಗಿ ವ್ಯವಸ್ಥಿತಿ ಹುನ್ನಾರ ನಡೆಯುತ್ತಿದೆ. ಇದರ ಫಲವಾಗಿ ಮನುವಾದ ರಾಷ್ಟ್ರೀಯ ಶಕ್ತಿಯಾಗಿ ಪರಿವರ್ತನೆಯಾಗಿದೆ. ಸಂವಿಧಾನದ ಪ್ರತಿಗಳನ್ನು ಸುಟ್ಟವರು, ಸಂವಿಧಾನದ ಬದಲಾಯಿಸುವ ಮನಸ್ಥಿತಿಯವರು ಅಧಿಕಾರ ಹಿಡಿದಿದ್ದಾರೆ. ಶೇ.70ರಷ್ಟು ಕ್ರಿಮಿನಲ್, ಶೇ.90ರಷ್ಟು ಕೋಟ್ಯಾಧಿಪತಿಗಳು ಸಂಸತ್ ಪ್ರವೇಶಿಸಿದ್ದು, ಇಂತಹ ಜನಪ್ರತಿನಿಧಿಗಳು ದೇಶದ ವೈವಿಧ್ಯ ಸಂಸ್ಕೃತಿಗೆ ಬದಲಾಗಿ ಏಕ ಸಂಸ್ಕೃತಿಯನ್ನು ಮುನ್ನಲೆಗೆ ತರುವ ತವಕದಲ್ಲಿದ್ದಾರೆಂದು ಅವರು ವಿಷಾದಿಸಿದ ಅವರು ಶೋಷಿತ ಸಮುದಾಯಗಳು ಶಿಕ್ಷಿತರಾಗಿ ಸಂಘಟಿತಗೊಂಡಲ್ಲಿ ಇಂತಹ ವಿಚಿದ್ರಕಾರಿ ಸಂತತಿಯವರನ್ನು ಸಂವಿಧಾನದ ಅಸ್ತ್ರದ ಮೂಲಕವೇ ನಾಶ ಮಾಡಲು ಸಾಧ್ಯ ಎಂದರು.

ಸಂವಿಧಾನ ಉಳಿಸಿ ಹೋರಾಟ ಸಮಿತಿ ಮುಖಂಡ ಗೌಸ್ ಮೊಹಿದ್ದೀನ್ ಪ್ರಸ್ತಾವಿಕವಾಗಿ ಮಾತನಾಡಿ, ಸಂವಿಧಾನಕ್ಕೆ ಅಪಾಯ ಎದುರಾದ ಸಂದರ್ಭದಲ್ಲಿ ದಲಿತ-ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಒಗ್ಗೂಡುವಿಕೆ ಅನಿವಾರ್ಯ. ಇಂತಹ ಒಗ್ಗೂಡುವಿಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ರೈತ ಸಂಘದ ಮುಖಂಡ ಕೃಷ್ಣೇಗೌಡ ಮಾತನಾಡಿದರು. ದಸಂಸ ಮುಖಂಡ ರಾಜರತ್ನಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವಸಂತ್‍ ಕುಮಾರ್, ರುದ್ರಯ್ಯ, ಕೃಷ್ಣಮೂರ್ತಿ, ಯಲಗುಡಿಗೆ ಹೊನ್ನಪ್ಪ, ಅಝ್ಮಲ್ ಪಾಶ, ಚಾಂದ್‍ಪಾಶ, ರಾಜಾಶಂಕರ್, ನಾಸಿರ್ ಮತ್ತಿತರರ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಗರದ ಮುಖ್ಯ ರಸ್ತೆಗಳಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಅಲ್ಪಸಂಖ್ಯಾತರ ಸಮುದಾಯಕ್ಕೆ ಪ್ರಾಮಾಣಿಕ ನಾಯಕತ್ವದ ಕೊರತೆ ಇದೆ. ಐಎಂಎ ಹಗರಣದಲ್ಲಿ ಲಕ್ಷಾಂತರ ಮಂದಿ ಮುಸ್ಲಿಮರು ಮನೆ, ಮಠ, ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಮೂಲಕ ಮುಸ್ಲಿಮರೇ ಮುಸ್ಲಿಮರ ಶೋಷಣೆಗಿಳಿದಿದ್ದಾರೆ. ಇಂತವರಿಗೆ ಮುಸ್ಲಿಂ ನಾಯಕರೆನಿಸಿಕೊಂಡವರೇ ಬೆಂಬಲಕ್ಕೆ ನಿಂತಿದ್ದಾರೆ. ಇಂತಹ ಸಮಸ್ಯೆಗಳ ವಿರುದ್ಧ ಹೋರಾಟ ಅನಿವಾರ್ಯ. ಹೋರಾಟಕ್ಕೆ ಸಮರ್ಥ ನಾಯಕತ್ವ ಅನಿವಾರ್ಯ. ಪ್ರಬಲ ಸಂಘಟನೆಯಿಂದ ಮಾತ್ರ ಅಲ್ಪಸಂಖ್ಯಾತರು ಉತ್ತಮ ನಾಯಕತ್ವ ಹಾಗೂ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ.
-ಶಹರಿಯಾರ್ ಖಾನ್, ಸಾಹಿತಿ, ಚಿಂತಕ

ಬಾಬಾಬುಡನ್ ಗಿರಿ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಲು ಮುಸ್ಲಿಂ ಸಮುದಾಯ ಜಾಗೃತಿ ವಹಿಸಬೇಕು. ಈ ವಿಚಾರದಲ್ಲಿ ಸಂಘರ್ಷಕ್ಕಿಳಿದಲ್ಲಿ ಬಾಬಾಬುಡನ್‍ಗಿರಿಯನ್ನು ಕೋಮುವಾದಿಗಳು ಮತ್ತೊಂದು ಅಯೋಧ್ಯೆಯನ್ನಾಗಿಸಿಕೊಂಡು ರಾಜಕೀಯ ಲಾಭ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
-ಶಹರಿಯಾರ್ ಖಾನ್, ಸಾಹಿತಿ, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News