ಕೊಡಗು ಪುನರ್ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬೇಕು: ಕಂದಾಯ ಸಚಿವರಿಗೆ ಶಾಸಕರ ಮನವಿ

Update: 2019-06-19 19:00 GMT

ಮಡಿಕೇರಿ, ಜೂ.19: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಮಳೆಹಾನಿಯಿಂದ ಕಣ್ಣೀರಿಡುತ್ತಿರುವ ಸಂತ್ರಸ್ತರಲ್ಲಿ ಹೊಸ ಚೈತನ್ಯ ಮೂಡಿಸಲು ಕೊಡಗಿನ ಪುನರ್ ನಿರ್ಮಾಣವಾಗಬೇಕಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ರಾಜ್ಯ ಕಂದಾಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ವಿಧಾನಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮನವಿ ಮಾಡಿದ್ದಾರೆ.

ಮಡಿಕೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದ ಶಾಸಕದ್ವಯರು ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಇಟ್ಟರು. ಕೊಡಗು ಜಿಲ್ಲೆಗೆ ಪ್ರಕೃತಿ ವಿಕೋಪ ಸಂಬಂಧಿತ ಸರ್ಕಾರದಿಂದ ಈಗಾಗಲೇ ಸಾರ್ವಜನಿಕ ರಸ್ತೆ ಮತ್ತು ಸೇತುವೆಗಾಗಿ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಗೆ ಸೇರಿದಂತೆ ಒಟ್ಟು 66.58 ಕೋಟಿ ಮಾತ್ರ ಅನುದಾನ ಬಿಡುಗಡೆಗೊಳಿಸಲಾಗಿದೆ. ಇನ್ನೂ ಸಹ ಇಲ್ಲಿನ ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣಕ್ಕೆ ಅನುದಾನವಿಲ್ಲದೆ ಕಾಮಗಾರಿ ಕೈಗೊಳ್ಳದೇ ಇರುವುದರಿಂದ ಈ ಭಾಗದ ರೈತರು ತಮ್ಮ ತಮ್ಮ ಕೃಷಿ ಭೂಮಿಗೆ ಹೋಗಿ ಕೃಷಿ ಮಾಡಲು ಸಹ ಆಗದೇ ತೊಂದರೆ ಅನುಭವಿಸುತ್ತಿದ್ದಾರೆ.  

ಒಟ್ಟು 1,24,117.00 ಹೆಕ್ಟೇರ್ ಕೃಷಿ ಭೂಮಿ ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಸಂಪೂರ್ಣ ಭೂಮಿ ಕಳೆದುಕೊಂಡ ರೈತರಿಗೆ ಬದಲಿ ಭೂಮಿ ನೀಡಿಲ್ಲ. ಮನೆ ಕಳೆದುಕೊಂಡವರಿಗೆ ಒಂದು ವರ್ಷ ಕಳೆಯುತ್ತಾ ಬಂದು ಈಗಾಗಲೇ ಮಳೆ ಪ್ರಾರಂಭವಾಗಿದ್ದು, ಈವರೆಗೆ ಒಬ್ಬರಿಗೂ ಮನೆ ವಿತರಣೆ ಮಾಡಿಲ್ಲ. ಜಿಲ್ಲೆಯ ಜನರು ಕಣ್ಣೀರಿನಿಂದ ಕೈ ತೊಳೆಯುವ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರ ಕೊಡಗು ಜಿಲ್ಲೆಯ ರೈತರ ಮತ್ತು ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿ ನಲುಗಿ ಹೋಗಿರುವ ಜಿಲ್ಲೆಯನ್ನು ಯಥಾಸ್ಥಿತಿಗೆ ತರುವಲ್ಲಿ ಸಹಕರಿಸಲು ತ್ವರೀತವಾಗಿ ಈ ಕೆಳಕಂಡ ಪ್ರಮುಖ ಬೇಡಿಕೆಯನ್ನು ಈಡೇರಿಸಬೇಕೆಂದು ಶಾಸಕ ರಂಜನ್ ಹಾಗೂ ಸುನಿಲ್ ಸುಬ್ರಮಣಿ ರಾಜ್ಯ ಕಂದಾಯ ಸಚಿವ ದೇಶಪಾಂಡೆಯವರಿಗೆ ಮನವಿ ಸಲ್ಲಿಸಿದರು.  

ಬೇಡಿಕೆಗಳು
ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮನೆ ಕಳೆದುಕೊಂಡು ನಿರ್ಗತಿಕರಾದ ನಿರಾಶ್ರಿತರಿಗೆ ಕೂಡಲೇ ಮನೆ ವಿತರಣೆಯಾಗಬೇಕು. ಮನೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ನೀಡಿ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಲು ಮುಂದೆ ಬರುವ ರೈತರಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಿ ಹೊಸದಾಗಿ ಸರ್ಕಾರದ ವತಿಯಿಂದ ನಿರ್ಮಿಸುತ್ತಿರುವ ಮನೆಯನ್ನು ತ್ವರಿತವಾಗಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು.  

ಈಗಾಗಲೇ ಕೊಡಗು ಜಿಲ್ಲಾಡಳಿತದಿಂದ ಅಪಾಯದ ಹಂಚಿನಲ್ಲಿರುವ ಕೆಲವು ಮನೆಗಳನ್ನು ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು, ಮನೆ ಖಾಲಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಆದರೆ ಈ ರೀತಿ ಒತ್ತಡಕ್ಕೆ ಒಳಗಾದ ನಿರಾಶ್ರಿತರು ಬಾಡಿಗೆ ಮನೆ ಪಡೆಯಲು ಮುಂಗಡ ಹಣ ಹಾಗೂ ಬಾಡಿಗೆ ಕಟ್ಟಲು ಹಣ ಇಲ್ಲದೇ ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗುತಿದೆ.  ಸರ್ಕಾರವು ಈ ರೀತಿ ಅಪಾಯದ ಹಂಚಿನಲ್ಲಿರುವ ನಿರಾಶ್ರಿತರನ್ನು ಬದಲಿ ಜಾಗಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಮುಂಗಡವಾಗಿ ಕನಿಷ್ಟ 10 ರಿಂದ 15 ಸಾವಿರ ರೂಪಾಯಿಯನ್ನು ನೀಡುವ ಮೂಲಕ ನಿರಾಶ್ರಿತರು ಬೀದಿ ಪಾಲಾಗದಂತೆ ಕ್ರಮ ವಹಿಸಬೇಕು. 

ಸಿ ಮತ್ತು ಡಿ. ಜಮೀನನ್ನು ಲ್ಯಾಂಡ್ ಬ್ಯಾಂಕಿನಿಂದ ಈಗಾಗಲೇ ರಾಜ್ಯ ಸರ್ಕಾರ ವಾಪಾಸ್ಸು ಪಡೆದಿರುವುದರಿಂದ ಅದನ್ನು ಜಮೀನು ಕಳೆದುಕೊಂಡ ರೈತರಿಗೆ ಹಂಚಬೇಕು, ರೈತರು ಈಗಾಗಲೇ ಒತ್ತುವರಿ ಮಾಡಿರುವ ಜಮೀನನ್ನು ಅವರವರ ಹೆಸರಿಗೆ ಮಂಜೂರು ಮಾಡಬೇಕು. ಕಾಫಿ ಬೆಳೆಗಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ, ನಂತರ ಪುನಃ ಸಾಲವನ್ನು ನೀಡಬೇಕು ಇಂತಹ ಸಾಲವನ್ನು ದೀರ್ಘಾವಧಿ ಬಡ್ಡಿ ರಹಿತ ಸಾಲವನ್ನಾಗಿ ಮಾಡಬೇಕು. 

ಜಮೀನು ಕಳೆದುಕೊಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಬಿ.ಪಿ.ಎಲ್ ಕಾರ್ಡ್ ನೀಡಬೇಕು. ಜಿಲ್ಲೆಯಲ್ಲಿನ ರಸ್ತೆ ಅಭಿವೃದ್ದಿಗೆ ಕೂಡಲೇ ಕನಿಷ್ಟ 500 ಕೋಟಿ ಬಿಡುಗಡೆ ಮಾಡಬೇಕು. ಜಮೀನು ಕಳೆದುಕೊಂಡು ನಿರಾಶ್ರಿತರಾಗಿರುವ ರೈತರ ಮಕ್ಕಳ ವಿದ್ಯಾಭ್ಯಾಸವನ್ನು ಸರ್ಕಾರವೇ ಭರಿಸಬೇಕು. ಪ್ರಥಮ ಪದವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅಂತಿಮ ವರ್ಷ ವ್ಯಾಸಂಗ ಮುಗಿಯುವ ವರೆಗೂ ಸರ್ಕಾರವೇ ವಿದ್ಯಾರ್ಥಿಗಳ  ಶುಲ್ಕವನ್ನು ಪಾವತಿಸಿ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಈಗಾಗಲೇ ಕೆಲವು ಕಡೆ ಗುಡ್ಡದ ಮೇಲೆ ಮನೆ ನಿರ್ಮಿಸಿಕೊಂಡಿರುವ ಕಡೆಗಳಲ್ಲಿ ಗುಡ್ಡಗಳು ಬೀರುಕು ಬಿಟ್ಟಿದ್ದು, ಮುಂದೆ ಅಪಾಯವಾಗುವ ಸಂಭವ ಹೆಚ್ಚು. ಈ ಪ್ರದೇಶದಲ್ಲಿ ವಾಸ ಮಾಡಲು ಸೂಕ್ತವಾಗಿರುವುದಿಲ್ಲ. ಆದುದರಿಂದ ಇಂತವರಿಗೂ ಸಹ ಹೊಸದಾಗಿ ಮನೆ ನಿರ್ಮಿಸಿಕೊಡಬೇಕು. 

ಗುಡ್ಡಗಳು ಕುಸಿದು ಮಣ್ಣುಗಳು ಒಂದೆಡೆ ಸೇರಿದ್ದು, ಕೆಲವು ಕಡೆ ತುಂಬಾ ಇಳಿಜಾರು ಪ್ರದೇಶವಾಗಿರವುದನ್ನು ಸರ್ಕಾರದ ಅನುಧಾನದಲ್ಲಿ ಅದನ್ನು ಸಮತಟ್ಟು ಮಾಡಿಸಿ ರೈತರು ಪುನ: ವ್ಯವಸಾಯ ಮಾಡಲು ಯೋಗ್ಯವಾಗುವಂತೆ ಭೂಮಿಯನ್ನು ಸರ್ಕಾರದ ಅನುಧಾನದಲ್ಲಿಯೇ ಹದ ಮಾಡಬೇಕು. ಭೂ ಕುಸಿತದಿಂದ ಮರಗಳು ಬಿದ್ದಿದ್ದು, ಅಂತಹ ಮರಗಳನ್ನು ಯಾವುದೇ ನಿರ್ಭಂದವಿಲ್ಲದೆ ರೈತರೇ ಮಾರಾಟ ಮಾಡಲು, ಇಲ್ಲವೇ ಸ್ವಂತ ಉಪಯೋಗಕ್ಕೆ ಉಪಯೋಗಿಸಿ ಕೊಳ್ಳಲು ಅವಕಾಶ ಕಲ್ಪಿಸಬೇಕು. 

ಭೂ ಕುಸಿತದಿಂದ ಮನೆಯ ದಾಖಲಾತಿಗಳು, ಭೂ ದಾಖಲಾತಿಗಳು, ವಿದ್ಯಾಭ್ಯಾಸಕ್ಕೆ ಸಂಬಂದಿಸಿದ ದಾಖಲಾತಿಗಳು ಮಣ್ಣಿನಲ್ಲಿ ನಾಶವಾಗಿರುವುದರಿಂದ ಸಂಬಂಧಿಸಿದ ಇಲಾಖೆ ಮೂಲಕ ಕೂಡಲೇ ಅಂತಹ ದಾಖಲಾತಿಗಳನ್ನು ಒದಗಿಸಲು ಸರ್ಕಾರವು ಕ್ರಮ ಕೈಗೊಳ್ಳಬೇಕು. 

ಕಳೆದ ವರ್ಷ ಕೊಡಗಿನ ವಿವಿಧೆಡೆ ಸಂಭವಿಸಿದ ಪ್ರಾಕೃತಿಕ ವಿಕೋಪ ಈ ಬಾರಿಯೂ ಕಂಡುಬರುವ ಸಾಧ್ಯತೆ ಇರುವುದಾಗಿ ಭಾರತೀಯ ಭೂ ವೈಜ್ಞಾನಿಕ ಸಮೀಕ್ಷ ಸಂಸ್ಥೆಯ ಮಾಜಿ ಡೆಪ್ಯೂಟಿ ಡೈರೆಕ್ಟರ್ ಡಾ.ಹೆಚ್.ಎಸ್.ಪ್ರಕಾಶ್  ಆತಂಕ ವ್ಯಕ್ತಪಡಿಸಿದ್ದು, ಇದರಿಂದ ಜನರಲ್ಲಿ ಆತಂಕ ಮೂಡಿದೆ. ಈ ಬಾರಿಯೂ 5 ಹಂತಗಳಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇರುವುದಾಗಿ ಉಲ್ಲೇಖಿಸಲಾಗಿದೆ. ಆದುದರಿಂದ ತಾವು ಕೂಡಲೇ ಮುಂಜಾಗೃತೆ ಕ್ರಮ ವಹಿಸಿ ಹೆಚ್ಚಿನ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News