ಪಾಂಡವಪುರ: ಸಕ್ಕರೆ ಕಾರ್ಖಾನೆ ಆರಂಭ, ನಾಲೆಗೆ ನೀರು ಬಿಡುಗಡೆಗೆ ಆಗ್ರಹಿಸಿ ರೈತರ ಧರಣಿ

Update: 2019-06-19 19:06 GMT

ಪಾಂಡವಪುರ, ಜೂ.19 : ಪಿಎಸ್‍ಎಸ್‍ಕೆ ಹಾಗೂ ಮೈಷುಗರ್ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕು, ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ಜಿಲ್ಲೆಯ ಎಲ್ಲಾ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ರೈತಸಂಘದ ಕಾರ್ಯಕರ್ತರು ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಬುಧವಾರ ಧರಣಿ ನಡೆಸಿದರು.

ಪಟ್ಟಣದ ಐದು ದೀಪದ ವೃತ್ತದಲ್ಲಿ ಜಮಾವಣೆಗೊಂಡ ರೈತರು, ಮಾನವ ಸರಪಳಿ ರಚಿಸಿ ಕೆಲ ಹೊತ್ತು ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ ಸಂಚಾರ ತಡೆದು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಿನಿ ವಿಧಾನಸೌಧದ ಮುಂಭಾಗ ಕೆಲ ಕಾಲ ಧರಣಿ ನಡೆಸಿ ತಹಶಿಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸುಮಾರು 10 ಲಕ್ಷ ಟನ್ ಕಬ್ಬು ಕಟಾವಿಗೆ ಬಂದಿದೆ. ಕಬ್ಬು ಬೆಳೆಗಾರರ ಸಂಕಷ್ಟ ನಿವಾರಣೆಗೆ ಪಿಎಸ್‍ಎಸ್‍ಕೆ ಹಾಗೂ ಮೈಷುಗರ್ ಕಾರ್ಖಾನೆ ಪ್ರಾರಂಭಿಸಬೇಕು. ಮುಂಗಾರು ವೈಫಲ್ಯದಿಂದ ಭೂಮಿಯಲ್ಲಿನ ಅಂತರ್ಜಲ ಬತ್ತಿ ಪಂಪ್‍ಸೆಟ್‍ನ ಎಲ್ಲ ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಬೆಳೆ ಕಳೆದುಕೊಳ್ಳುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಜನಜಾನುವಾರುಗಳಿಗೆ ಕುಡಿಯುವ ನೀರು, ಮೇವು ಪೂರೈಕೆಗೆ ಈ ಕೂಡಲೇ ಅನುದಾನ ಒದಗಿಸಬೇಕು. ಈ ಸಂಬಂಧ ಅಗತ್ಯ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕೆಆರ್‍ಎಸ್, ಹೇಮಾವತಿ ಅಣೆಕಟ್ಟು ಪ್ರದೇಶದ ನಾಲೆಗಳಲ್ಲಿ ನೀರು ಹರಿಸಿ ಬೆಳೆ ಉಳಿಸಬೇಕು. ಬೆಳೆನಷ್ಟ ಅಂದಾಜು ಮಾಡಿ ಪರಿಹಾರ ಕೊಡಬೇಕು. ಭತ್ತ ಖರೀದಿ ಕೇಂದ್ರ ತೆರೆಯಬೇಕು. ಕೆಆರ್‍ಎಸ್ ಸುತ್ತಮುತ್ತ ಹಾಗೂ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತೆರವುಗೊಳಿಸಬೇಕು. ಆರ್‍ಬಿಐ ನೀತಿ ಉಲ್ಲಂಘಿಸಿ ಶೇ.24 ಬಡ್ಡಿ ವಿಧಿಸುತ್ತಿರುವ ಪಾಂಡವಪುರದಲ್ಲಿರುವ ಮುತ್ತೂಟ್ ಹಣಕಾಸು ಸಂಸ್ಥೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ತಾಲೂಕು ಕಚೇರಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸಬೇಕು. ರೈತರ ಪಂಪ್‍ಸೆಟ್‍ಗಳಿಗೆ ಹಾಗೂ ಗೃಹಬಳಕೆಗೆ ಪೂರ್ಣ ಗುಣಮಟ್ಟದ ನಿರಂತರವಾಗಿ ತಡೆರಹಿತ ವಿದ್ಯುತ್ ಪೂರೈಸಬೇಕು ಎಂದು ತಾಕೀತು ಮಾಡಿದರು. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಒಂದು ಪಕ್ಷದ ಏಜೆಂಟರಂತೆ ವರ್ತಿಸಲಾಗುತ್ತಿದೆ ಎಂದು ಆರೋಪಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ದಯಾನಂದ್, ಹರವು ಪ್ರಕಾಶ್, ಅಮೃತಿ ರಾಜಶೇಖರ್, ಕೆನ್ನಾಳು ನಾಗರಾಜು, ಎಣ್ಣೆಹೊಳೆಕೊಪ್ಪಲು ಮಂಜುನಾಥ್, ರಘು, ಇತರ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News