ಉತ್ತರ ಪ್ರದೇಶ: ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ನಾಲ್ಕು ದಿನದ ಹಸುಳೆ ಬಲಿ

Update: 2019-06-20 04:24 GMT

ಬರೇಲಿ, ಜೂ.20: ಚಿಕಿತ್ಸೆಗಾಗಿ ಕರೆತಂದ ನಾಲ್ಕು ದಿನದ ಹಸುಳೆಯನ್ನು ಮೂರು ಗಂಟೆ ಕಾಲ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸುತ್ತಾಡಿಸಿದ ಪರಿಣಾಮವಾಗಿ ಮಗು ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಪಶ್ಚಿಮ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಘಟನೆ ಹಿನ್ನೆಲೆಯಲ್ಲಿ ಒಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯನ್ನು ಸರ್ಕಾರ ಅಮಾನತು ಮಾಡಿದ್ದು, ಇತರ ಆಸ್ಪತ್ರೆಗಳ ಉಸ್ತುವಾರಿ ಹೊಂದಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ.

ಜೂನ್ 15ರಂದು ಖಾಸಗಿ ಆಸ್ಪತ್ರೆಯಲ್ಲಿ ಹುಟ್ಟಿದ ಹೆಣ್ಣುಮಗುವಿಗೆ ಪೋಷಕರು ಊರ್ವಶಿ ಎಂದು ಹೆಸರಿಟ್ಟಿದ್ದರು. ಬುಧವಾರ ಬೆಳಗ್ಗೆ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಇದರಿಂದ ಆತಂಕಿತರಾದ ಪೋಷಕರು ಬರೇಲಿ ನಗರದ ಸರ್ಕಾರಿ ಆಸ್ಪತ್ರೆ ಸಂಕೀರ್ಣಕ್ಕೆ ಮಗುವನ್ನು ಕರೆದೊಯ್ದರು. ಆದರೆ ಪುರುಷರ ಆಸ್ಪತ್ರೆಯ ವೈದ್ಯರು ಮಗುವನ್ನು ತಪಾಸಣೆ ಮಾಡಲು ನಿರಾಕರಿಸಿ, ಅದೇ ಸಂಕೀರ್ಣದಲ್ಲಿರುವ ಮಹಿಳೆಯರ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದರು. ವೈದ್ಯರ ಸೂಚನೆಯಂತೆ ಮಹಿಳೆಯರ ಆಸ್ಪತ್ರೆಗೆ ಕರೆದೊಯ್ದಾಗ, ಇಲ್ಲಿ ಬೆಡ್ ಖಾಲಿ ಇಲ್ಲ; ಪುರುಷರ ಆಸ್ಪತ್ರೆಗೇ ಸೇರಿಸಿ ಎಂದು ವಾಪಸ್ ಕಳುಹಿಸಲಾಗಿದೆ.

"ಮೂರು ಗಂಟೆಗೂ ಹೆಚ್ಚು ಕಾಲ ನಮ್ಮನ್ನು ಅತ್ತಿಂದಿತ್ತ ಅಲೆದಾಡಿಸಲಾಯಿತು. ಎಲ್ಲೂ ಮಗುವನ್ನು ದಾಖಲಿಸಿಕೊಳ್ಳಲಿಲ್ಲ. ಅಂತಿಮವಾಗಿ ನಾವು ಮನೆಗೆ ವಾಪಸ್ಸಾಗಲು ನಿರ್ಧರಿಸಿದೆವು. ಆದರೆ ಆಸ್ಪತ್ರೆಯ ಮೆಟ್ಟಿಲಲ್ಲೇ ಮಗು ಅಸುನೀಗಿತು" ಎಂದು ಮಗುವಿನ ಅಜ್ಜಿ ಕುಸುಮಾದೇವಿ ವಿವರಿಸಿದರು.

ಮಗುವಿನ ವೈದ್ಯಕೀಯ ವಿವರಗಳ ಚೀಟಿಯಲ್ಲೇ ವೈದ್ಯರು, ಮಗುವಿನ ಪೋಷಕರಿಗೆ ಸೂಚನೆಯನ್ನು ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗಳ ನಡುವೆ ಸಂಘರ್ಷ ಆರಂಭವಾಗಿದೆ. ಪುರುಷರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕಮಲೇಂದ್ರ ಸ್ವರೂಪ್ ಗುಪ್ತಾ ಹಾಗೂ ಮಹಿಳೆಯರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಲ್ಕಾ ಶರ್ಮಾ ಘಟನೆಗೆ ಸಂಬಂಧಿಸಿದಂತೆ ಪರಸ್ಪರ ದೋಷಾರೋಪ ಮಾಡಿಕೊಂಡಿದ್ದು, ಮಗುವಿನ ಸಾವಿನ ಹೊಣೆಯನ್ನು ಹೊರಲು ಇಬ್ಬರೂ ನಿರಾಕರಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಬರೇಲಿ ಸರ್ಕಾರಿ ಪುರುಷರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಮಹಿಳೆಯರ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರ ವಿರುದ್ಧವೂ ವಿಚಾರಣೆ ಅರಂಭಿಸಲಾಗಿದೆ. ತೀವ್ರವಾಗಿ ಅಸ್ವಸ್ಥವಾಗಿದ್ದ ಮಗುವನ್ನು ಮೊದಲು ಪುರುಷರ ಆಸ್ಪತ್ರೆಗೆ ಕರೆ ತರಲಾಗಿತ್ತು. ಸಾಕಷ್ಟು ಮಕ್ಕಳ ತಜ್ಞರು ಕರ್ತವ್ಯದಲ್ಲಿದ್ದರೂ, ಮಗುವನ್ನು ಮಹಿಳೆಯರ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿತ್ತು. ಆ ಬಳಿಕ ಮಹಿಳಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮಗುವನ್ನು ಮತ್ತೆ ಪುರುಷರ ಆಸ್ಪತ್ರೆಗೆ ಕಳುಹಿಸಿದ್ದರು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News