ಗುಜರಾತ್: ಮೇಲ್ಜಾತಿಯವರ ಕ್ರೌರ್ಯಕ್ಕೆ ಬಲಿಯಾದ ದಲಿತ ನಾಯಕ

Update: 2019-06-20 05:37 GMT

 ಅಹ್ಮದಾಬಾದ್, ಜೂ.20: ಗುಜರಾತ್‌ನ ಹಳ್ಳಿಯೊಂದರ ಉಪ ಸರಪಂಚ, ದಲಿತ ಸಮುದಾಯದ ಮಂಜಿ ಸೋಳಂಕಿ ಅವರನ್ನು ಮೇಲ್ಜಾತಿಯ ಕ್ಷತ್ರೀಯ ಸಮುದಾಯಕ್ಕೆ ಸೇರಿದ ಗುಂಪೊಂದು ಮಾರಕಾಸ್ತ್ರಗಳಿಂದ ಹೊಡೆದು ಕೊಂದು ಹಾಕಿರುವ ಘಟನೆ ಬುಧವಾರ ನಡೆದಿದೆ.

 ಸೋಳಂಕಿ ತನಗೆ ಪೊಲೀಸ್ ಭದ್ರತೆ ನೀಡುವಂತೆ ಸಲ್ಲಿಸಿರುವ ಅರ್ಜಿಯನ್ನು ಕಳೆದ ಎರಡು ವಾರಗಳಿಂದ ಬಾಕಿ ಉಳಿಸಿಕೊಳ್ಳಲಾಗಿತ್ತು. ಬೊಟಾಡ್ ಜಿಲ್ಲೆಯ ರಾನ್ಪುರ ತಾಲೂಕಿನ ಜಲಿಲಾ ಹಳ್ಳಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಸೋಳಂಕಿಗೆ ಕಾರಿನಲ್ಲಿ ಬಂದ ಗುಂಪು ಕಬ್ಬಿಣ ಪೈಪ್‌ಗಳಿಂದ ಥಳಿಸಿ ಗಂಭೀರ ಗಾಯಗೊಳಿಸಿತ್ತು. ಸೋಳಂಕಿ ಅಹ್ಮದಾಬಾದ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಸೋಳಂಕಿ ಪುತ್ರ ತುಷಾರ್ ಸೋಳಂಕಿ ಹೇಳಿದ್ದಾರೆ.

‘‘ಮಾಹಿತಿ ಕಲೆ ಹಾಕಲು ನಾವು ತಂಡವೊಂದನ್ನು ಅಹ್ಮದಾಬಾದ್‌ಗೆ ಕಳುಹಿಸಿಕೊಟ್ಟಿದ್ದೇವೆ. ಬಲಿಪಶುವಾದ ಸೋಳಂಕಿಯ ಕುಟುಂಬದವರೇ ಘಟನೆಗೆ ಮೊದಲ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ’’ಎಂದು ಬೊಟಾಡ್ ವಲಯದ ಉಪ ಪೊಲೀಸ್ ಆಯುಕ್ತ ಆರ್‌ಎನ್ ನಕುಮ್ ಹೇಳಿದ್ದಾರೆ.

ಒಂದು ತಿಂಗಳೊಳಗೆ ಸೌರಾಷ್ಟ್ರ ವಲಯದಲ್ಲಿ ಮೂರನೇ ಬಾರಿ ದಲಿತನೊಬ್ಬನನ್ನು ಕ್ಷತ್ರೀಯ ಸಮುದಾಯದವರು ಹಲ್ಲೆ ನಡೆಸಿ ಸಾಯಿಸಿರುವ ಘಟನೆ ನಡೆದಿದೆ.

ಮಂಜಿ ಹಲವು ಬಾರಿ ಪೊಲೀಸ್ ಭದ್ರತೆಗಾಗಿ ಮನವಿ ಸಲ್ಲಿಸಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಬುಧವಾರ ದಾಳಿ ನಡೆಯುವ ಮೊದಲು ನಾಲ್ಕು ಬಾರಿ ಮಂಜಿಯನ್ನು ಗುರಿ ಮಾಡಿ ದಾಳಿ ನಡೆದಿತ್ತು. 2018ರ ಮಾ.3 ರಂದು ಅವರಿಗೆ ಇರಿದು ಗಾಯಗೊಳಿಸಲಾಗಿತ್ತು ಮಂಜಿ ಪುತ್ರ ತುಷಾರ್ ಹೇಳಿದ್ದಾರೆ.

  ಮಂಜಿ ಮೇಲೆ ನಿರಂತರ ದಾಳಿ ಪ್ರಕರಣದ ಬಳಿಕ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಆದರೆ, ಎರಡು ತಿಂಗಳ ಬಳಿಕ 2018ರ ಮಾ.17 ರಂದು ಭದ್ರತೆಯನ್ನು ಹಿಂಪಡೆಲಾಗಿತ್ತು ಎಂದು ದಲಿತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಹ್ಮದಾಬಾದ್ ಮೂಲದ ಎನ್‌ಜಿಒ ಅರವಿಂದ್ ಮಕ್ವಾನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News