ಪೊಲೀಸರಿಂದ ಲಾಠಿಚಾರ್ಜ್: ಬಿಜೆಪಿ ಶಾಸಕ ರಾಜಾ ಸಿಂಗ್ ತಲೆಗೆ ಗಾಯ

Update: 2019-06-20 09:18 GMT

ಹೈದರಾಬಾದ್, ಜೂ.20: ಪೂರ್ವಾನುಮತಿಯಿಲ್ಲದೆ ಸ್ವಾತಂತ್ರ ಹೋರಾಟಗಾರ್ತಿ ರಾಣಿ ಅವಂತಿ ಬಾಯ್ ಲೋಧ್ ಅವರ ಪ್ರತಿಮೆಯನ್ನು ಮರುಸ್ಥಾಪಿಸಲು ಯತ್ನಿಸುತ್ತಿದ್ದ ಹೈದರಾಬಾದ್‌ನ ಗೋಶಮಹಲ್‌ನ ಬಿಜೆಪಿ ಶಾಸಕ ಟಿ.ರಾಜ್ ಸಿಂಗ್‌ಗೆ ಪೊಲೀಸರು ಬುಧವಾರ ರಾತ್ರಿ ಲಾಠಿಚಾರ್ಜ್ ನಡೆಸಿದ್ದು, ಪರಿಣಾಮ ಅವರ ತಲೆಗೆ ಗಾಯವಾಗಿದೆ.

" ಪ್ರತಿಮೆಯನ್ನು ಮೊದಲೇ ಧ್ವಂಸಗೊಳಿಸಲಾಗಿತ್ತು. ನನ್ನ ಬೆಂಬಲಿಗರು ಹೊಸ ಪ್ರತಿಮೆಯನ್ನು ಸ್ಥಾಪಿಸಲು ಯತ್ನಿಸುತ್ತಿದ್ದರು. ಆಗ ಪೊಲೀಸರು ಮಧ್ಯೆ ಪ್ರವೇಶಿಸಿ, ತಾನು ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿಲ್ಲ ಎಂದು ಹೇಳಿದ್ದರು. ನನಗೆ ಹಾಗೂ ನನ್ನ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ವೇಳೆ ನನ್ನ ತಲೆಗೆ ಗಾಯವಾಗಿದ್ದು, ಕೆಲವು ಹೊಲಿಗೆಗಳನ್ನು ಹಾಕಲಾಗಿದೆ''ಎಂದು ರಾಜಾ ಸಿಂಗ್ ಹೇಳಿದ್ದಾರೆ.

1857ರಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದಿರುವ ರಾಣಿ ಅವಂತಿ ಬಾಯ್ ಲೋಧ್ ಅವರ ಪ್ರತಿಮೆ ಜುಮೆರಟ್ ಬಝಾರ್ ಪ್ರದೇಶದಲ್ಲಿದ್ದು, ಈ ಹಿಂದೆ ಎರಡು ಬಾರಿ ಪ್ರತಿಮೆಯನ್ನು ದಾರಿಹೋಕರು ಧ್ವಂಸಗೊಳಿಸಿದ್ದರು.

ಬಿಜೆಪಿ ಶಾಸಕ ಹಾಗೂ ಆತನ ಬೆಂಬಲಿಗರು ಮೊದಲಿಗೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಆ ಬಳಿಕ ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News