ತಪ್ಪಿತಸ್ಥ ಮುಸ್ಲಿಮರನ್ನು ಶಿಕ್ಷಿಸಿ, ‘ಮುಸ್ಲಿಮರ ಓಲೈಕೆ’ ಎಂಬ ಹಣೆಪಟ್ಟಿ ಕಳಚಿ: ಮಮತಾಗೆ ಮುಸ್ಲಿಮರ ಪತ್ರ

Update: 2019-06-20 10:56 GMT

ಕೊಲ್ಕತ್ತಾ, ಜೂ.20: ಮುಸ್ಲಿಮ್ ಸಮುದಾಯದ ಅಪರಾಧದಲ್ಲಿ ತೊಡಗಿರುವ ಜನರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ‘ಮುಸ್ಲಿಮರ ಓಲೈಕೆ’ ಎಂಬ ಹಣೆಪಟ್ಟಿಯನ್ನು ಕಿತ್ತು ಹಾಕಿ ಎಂದು ಕೊಲ್ಕತ್ತಾದ ಮುಸ್ಲಿಂ ಸಮುದಾಯದ ಹಲವು ಗಣ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಆಗ್ರಹಿಸಿ ಪತ್ರ ಬರೆದಿದ್ದಾರೆ.

ಇತ್ತೀಚೆಗೆ  ಎನ್ ಆರ್ ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಹಿಂಸೆ ಹಾಗೂ ರೂಪದರ್ಶಿ ಉಶೋಷಿ ಸೇನ್‍ ಗುಪ್ತಾ ಮತ್ತವರ ಕ್ಯಾಬ್ ಚಾಲಕನನ್ನು ಕೆಲ ಮಂದಿ ಬೆಂಬತ್ತಿ ಗಲಾಟೆ ನಡೆಸಿದ ಎರಡು ಘಟನೆಗಳನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳನ್ನು 24 ಗಂಟೆಗಳೊಳಗಾಗಿ ಬಂಧಿಸಲಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

``ಎರಡೂ ಪ್ರಕರಣಗಳಲ್ಲಿ ಆರೋಪಿಗಳು ನಮ್ಮ ಸಮುದಾಯದವರು. ಇದರಿಂದ ನಮಗೆ ಮುಜುಗರವಾಗಿದೆ. ಈ ಎರಡು ಪ್ರಕರಣಗಳಲ್ಲಿ ಮಾತ್ರವಲ್ಲ ಮುಸ್ಲಿಮರು ಶಾಮೀಲಾಗಿರುವ ಪ್ರತಿಯೊಂದು ಪ್ರಕರಣಗಳ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ಮುಸ್ಲಿಮರೆಂಬ ಮಾತ್ರಕ್ಕೆ ಅವರಿಗೆ  ತಪ್ಪಿಸಲು ಅವಕಾಶ ನೀಡಬಾರದು. ಅವರ ವಿರುದ್ಧ  ಕ್ರಮ ಕೈಗೊಂಡರೆ ನಮ್ಮ ಸಮುದಾಯದ ಮಂದಿಯನ್ನು ರಕ್ಷಿಸಲಾಗುತ್ತಿಲ್ಲ, ಓಲೈಕೆ ಮಾಡಲಾಗುತ್ತಿಲ್ಲ ಎಂಬ ಸಂದೇಶ ಸಾರಿದಂತಾಗುತ್ತದೆ'' ಎಂದು ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News