ರಾಜ್ಯದ ಮಹಾನಗರವೂ ಅಪಾಯದಲ್ಲಿ: ಬತ್ತಿಹೋಗಲಿದೆ ಅಂತರ್ಜಲ

Update: 2019-06-20 16:18 GMT

ಹೊಸದಿಲ್ಲಿ, ಜೂ.20: ಬೆಂಗಳೂರು ಸಹಿತ ಭಾರತದ 21 ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಮಟ್ಟ ಸಂಪೂರ್ಣ ಬರಿದಾಗಲಿದ್ದು, ಇದರಿಂದ ಸುಮಾರು 100 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಅಂತರ್ಜಲ ಮಟ್ಟದ ಕುರಿತು ನೀತಿ ಆಯೋಗದ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರ ಸೇರಿದಂತೆ ದೇಶದ 21 ನಗರಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಈಗಲೇ ಮುನ್ನೆಚ್ಚರಿಕೆ ವಹಿಸಿ ನೀರನ್ನು ಸಂರಕ್ಷಿಸದಿದ್ದರೆ 2020ರಲ್ಲಿ ಸಂಪೂರ್ಣ ಬತ್ತಿಹೋಗಲಿದೆ. 2020ರ ಆಗಮನಕ್ಕೆ ಇನ್ನು ಹೆಚ್ಚಿನ ಸಮಯವಿಲ್ಲ ಎಂಬುದು ಇನ್ನಷ್ಟು ಆತಂಕಕಾರಿಯಾಗಿದೆ. 2030ರ ವೇಳೆಗೆ ದೇಶದ ಜನಸಂಖ್ಯೆಯ ಶೇ.40ರಷ್ಟು ಜನತೆಗೆ ಕುಡಿಯಲು ನೀರೇ ದೊರಕದ ಪರಿಸ್ಥಿತಿ ಬರಲಿದೆ. ಚೆನ್ನೈಯಲ್ಲಿ ಇತರ ಮೆಟ್ರೋ ನಗರಗಳಿಗಿಂತ ಹೆಚ್ಚಿನ ಮಳೆಯಾಗಿದ್ದರೂ ಮೂರು ನದಿಗಳು, ನಾಲ್ಕು ಜಲಸಂಪನ್ಮೂಲಗಳು, ಐದು ಜಲಮಯ ಪ್ರದೇಶಗಳು ಹಾಗೂ ಆರು ಅರಣ್ಯ್ರಪ್ರದೇಶಗಳು ಸಂಪೂರ್ಣ ಬತ್ತಿ ಹೋಗಿವೆ ಎಂದು ವರದಿ ತಿಳಿಸಿದೆ.

ಚೆನ್ನೈಯಲ್ಲಿ ಸರಕಾರ ಕುಡಿಯುವ ನೀರಿಗಾಗಿ ಸಮುದ್ರದ ನೀರಿನ ಉಪ್ಪು ಇಂಗಿಸುವಿಕೆಯನ್ನು ಅವಲಂಬಿಸಿದ್ದು ಇದು ಅತ್ಯಂತ ದುಬಾರಿಯಾಗಿದೆ. ಭೂಮಿ ಎಂಬ ಗ್ರಹಕ್ಕೂ ಮಿತಿಯಿದೆ ಮತ್ತು ಸಾಗರಗಳೂ ಬತ್ತಿ ಹೋಗುತ್ತವೆ ಎಂಬುದನ್ನು ಸರಕಾರ ಮರೆತಿರಬಹುದು. ಹೀಗಾದರೆ ನಾವು ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಏನನ್ನು ಉಳಿಸಿದಂತಾಗುತ್ತದೆ. ನಮ್ಮಲ್ಲಿ ಬಹಳ ಹಣ ಇರಬಹುದು. ಆದರೆ ನೀರಿನ ಬದಲು ಹಣವನ್ನು ಕುಡಿಯುವಂತೆ ಮಕ್ಕಳಿಗೆ ಹೇಳಲಾದೀತೇ. ಸಮುದ್ರದ ನೀರಿನ ಉಪ್ಪನ್ನು ಇಂಗಿಸಿ ಬಳಸುವುದು ಸಮಸ್ಯೆಗೆ ಪರಿಹಾರವಲ್ಲ. ಜಲಕೊಯ್ಲು ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ರಾಷ್ಟ್ರೀಯ ಜಲ ಮಂಡಳಿಯ ಮಾಜಿ ನಿರ್ದೇಶಕ ಪ್ರೊ ಮನೋಹರ್ ಖುಶಾಲಿನಿ ಹೇಳಿದ್ದಾರೆ.

 ನೀರನ್ನು ಸಂರಕ್ಷಿಸುವುದು ಹಾಗೂ ಅಂತರ್ಜಲ ಮಟ್ಟ ವೃದ್ಧಿ ಕಾರ್ಯದಲ್ಲಿ ಕೈಜೋಡಿಸುವುದು ಸರಕಾರ ಹಾಗೂ ಜನತೆಯ ಸಾಮೂಹಿಕ ಜವಾಬ್ದಾರಿಯಾಗಿದೆ. ಮಳೆನೀರಿನ ಕೊಯ್ಲು ಪ್ರಕ್ರಿಯೆ ಅತ್ಯಂತ ಸುಲಭ, ಸರಳ ಹಾಗೂ ಕಡಿಮೆ ವೆಚ್ಚದ ಮಾರ್ಗವಾಗಿದೆ. ಮುಂದಿನ ಜನಾಂಗದ ಒಳಿತಿಗಾಗಿ ವೈಯಕ್ತಿಕವಾಗಿ ಅಥವಾ ವಸತಿ ಕಾಲೊನಿಗಳಲ್ಲಿ ಸಾಮೂಹಿಕವಾಗಿ ಮಳೆನೀರು ಕೊಯ್ಲು ನಡೆಸಬಹುದಾಗಿದೆ ಎಂದು ಮನೋಹರ್ ಹೇಳಿದ್ದಾರೆ.

ತಮ್ಮ ಮನೆಯೊಳಗೆ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸಿರುವ ಮನೋಹರ್, 2003ರಿಂದ ಮಳೆನೀರಿನ ಕೊಯ್ಲು ನಡೆಸಿ ಈ ಪ್ರದೇಶದ ಅಂತರ್ಜಲ ವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ.

 “ನಾನು ಕೊರೆಸಿದ್ದ 60 ಅಡಿ ಆಳದ ಬೋರ್‌ವೆಲ್ 2003ರಲ್ಲಿ ಬರಿದಾಯಿತು. ಆಗ ಮನೆಯ ಛಾವಣಿಗೆ ಜೋಡಿಸಿದ ಪೈಪ್‌ನಿಂದ ಮಳೆನೀರನ್ನು ಬೋರ್‌ವೆಲ್‌ನ ಒಳಗೆ ಹರಿಯಲು ವ್ಯವಸ್ಥೆ ಮಾಡಿದೆ. ನನ್ನ ಮನೆಯ ಛಾವಣಿಯಲ್ಲಿ ಸಂಗ್ರಹಿತವಾದ ಮಳೆ ನೀರು ಪೈಪ್‌ನ ಮೂಲಕ ಸಾಗಿ ಬೋರ್‌ವೆಲ್‌ಗೆ ಇಳಿಯುತ್ತದೆ. ಭೂಮಿಯೊಳಗೆ 60 ಅಡಿ ಆಳಕ್ಕೆ ನೀರು ಇಳಿದರೆ ಬಳಿಕ ನೆಲದಲ್ಲಿರುವ ಮರಳಿನ ಅಂಶ ನೀರನ್ನು ಸ್ವಯಂ ಶುದ್ಧೀಕರಿಸುತ್ತದೆ. ರಸ್ತೆ ಮೇಲೆ ಹರಿಯುವ ಮಳೆ ನೀರನ್ನು ನೇರವಾಗಿ ಭೂಮಿಯೊಳಗೆ ಇಂಗಿಸದೆ, ಶುದ್ಧೀಕರಿಸಿದ ನೀರು ಮಾತ್ರ ಭೂಮಿಗೆ ಸೇರುವಂತೆ ಮಾಡಬೇಕು. ಇಲ್ಲದಿದ್ದರೆ ನೀರು ಕಲುಶಿತವಾಗುತ್ತದೆ” ಎಂದವರು ಹೇಳುತ್ತಾರೆ.

ಬರದ ನಾಡಿನಲ್ಲಿ ಕಬ್ಬು ಬೇಡ

ಬರದ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಕಬ್ಬು ಬೆಳೆಯಬಾರದು ಎಂದು ಪ್ರೊಫೆಸರ್ ಮನೋಹರ್ ಖುಶಾಲಿನಿ ಸಲಹೆ ನೀಡುತ್ತಾರೆ. ಕಬ್ಬು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯಿಂದ ನೀರನ್ನು ಹೀರಿಕೊಳ್ಳುತ್ತದೆ. ಇಂದಿನ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿದ್ದರೆ ನಾಳೆ ಎದುರಾಗುವ ಅಪಾಯವನ್ನು ದೂರವಾಗಿಸಬಹುದು ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News