ಮಕ್ಕಳ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸಿ: ಡಿಸಿ ಅನೀಸ್ ಕಣ್ಮಣಿ ಜಾಯ್

Update: 2019-06-20 16:46 GMT

ಮಡಿಕೇರಿ, ಜೂ.20: ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ ಪದ್ಧತಿ ಹಾಗೂ ಇತರೆ ಸಮಸ್ಯೆಗಳನ್ನು ಹೋಗಲಾಡಿಸಲು ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಮಟ್ಟದ ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಮಕ್ಕಳಾ ರಕ್ಷಣಾ ಘಟಕದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ, ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಬಾಲ ಮಕ್ಕಳಿಗೆ ಶಿಕ್ಷಣ ಸಂಸ್ಥೆ, ಶಾಲಾ ವಾಹನ, ತರಗತಿ, ಹಾಗೂ ಇತರ ಸ್ಥಳಗಳಲ್ಲಿ ವಿವಿಧ ತೆರನಾದ ದೌರ್ಜನ್ಯ ಮತ್ತು ಹಿಂಸೆ ಮುಂತಾದ ಪ್ರಕರಣಗಳನ್ನು ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. 

ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿ ಮಕ್ಕಳ ಅಪರಾಧ ಹಿಂಸೆಗಳು ನಡೆಯದಂತೆ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಎಚ್ಚರವಹಿಸಬೇಕು ಎಂದರು. 

ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿನ ಶಿಕ್ಷಣ ವಂಚಿತ ಮಕ್ಕಳಿಗೆ ಜನಾಂಗದ ಮುಖಂಡರೊಡನೆ ಚರ್ಚೆ ನಡೆಸಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಬೇಕು. ಶಾಲಾ ಮಕ್ಕಳಿಗೆ ಸ್ವಯಂ ರಕ್ಷಣೆಯ ಬಗ್ಗೆ ಶಾಲೆ ಕಾಲೇಜುಗಳಲ್ಲಿ ತರಬೇತಿ ಕಾರ್ಯಾಗಾರವನ್ನು ನೀಡುವುದು ಮುಖ್ಯವಾಗಿದೆ. ಈ ಬಗ್ಗೆ ಶಾಲಾ ಶಿಕ್ಷಕರಿಗೆ ಮೊದಲ ಹಂತದ ತರಬೇತಿಯನ್ನು ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುಮ್ತಾಜ್ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪಾಲನಾ ಯೋಜನೆಯು ಎಚ್‍ಐವಿ ಸೋಂಕಿತ ಅಥವಾ ಬಾಧಿತ ಮಕ್ಕಳ ಪೋಷಕರು ಮರಣ ಹೊಂದಿದಲ್ಲಿ ಅಂತಹ ಮಕ್ಕಳಿಗೆ ಈ ಯೋಜನೆಯಡಿ 18 ವರ್ಷದೊಳಗಿನ ಮಕ್ಕಳಿಗೆ ಧನಸಹಾಯ ಒದಗಿಸಲಾಗುತ್ತದೆ. 2013 ರಿಂದ 2019 ರವರೆಗೆ 240 ಫಲಾನುಭವಿಗಳಿಗೆ ಸಹಾಯಧನ ಒದಗಿಸಲಾಗಿದೆ. 197 ಭೌತಿಕ ಗುರಿ ಹೊಂದಿದ್ದು, 17,32,000 ರೂ ಗಳನ್ನು ಆರ್‍ಟಿಜಿಎಸ್ ಮೂಲಕ 197 ಮಕ್ಕಳಿಗೆ ಬಿಡುಗಡೆ ಮಾಡಲಾಗಿದೆ. ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸುವುದು, ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರವು ವೈದ್ಯಕೀಯ ಚಿಕಿತ್ಸೆ, ಪೌಷ್ಟಿಕ ಆಹಾರ, ವೃತ್ತಿ ತರಬೇತಿ ಹಾಗೂ ಇತರೆ ಅವಶ್ಯಕತೆಗಳನ್ನು ಪೂರೈಸಲು ಪ್ರತಿ ಕುಟುಂಬದಲ್ಲಿನ 18 ವರ್ಷದೊಳಗಿನ 2 ಮಕ್ಕಳಿಗೆ ಪ್ರತಿ ತಿಂಗಳಿಗೆ 1,000 ರೂ. ನಂತೆ 3 ವರ್ಷಗಳ ಕಾಲ ಸಹಾಯ ನೀಡಲಾಗುತ್ತದೆ. 93 ಭೌತಿಕ ಗುರಿ ಹೊಂದಿದ್ದು ರೂ. 11,16,000 ಆರ್ಥಿಕತೆ ಹೊಂದಿದೆ ಎಂದು ಅವರು ತಿಳಿಸಿದರು.  

ಮಮತೆಯ ತೊಟ್ಟಿಲು ಯೋಜನೆಯಡಿ ಪೋಷಕರಿಗೆ ಬೇಡವಾದ ಮಕ್ಕಳನ್ನು ಇದುವರೆಗೆ 14 ಗಂಡು ಮತ್ತು 7 ಹೆಣ್ಣು ಒಟ್ಟು 21 ಮಕ್ಕಳಿಗೆ ರಕ್ಷಣೆ ಮಾಡಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು 2012 ರಿಂದ 2018 ರವರೆಗೆ 2 ಗಂಡು ಮತ್ತು 222 ಹೆಣ್ಣು ಒಟ್ಟು 224 ಆಗಿದ್ದು, 115 ಖುಲಾಸೆ ಪ್ರಕರಣಗಳ ವಿಲೇವಾರಿಯಾಗಿದ್ದು 34 ಪ್ರಕರಣಗಳಿಗೆ ಶಿಕ್ಷೆಯಾಗಿದೆ. ಬಾಕಿ 75 ಪ್ರಕರಣಗಳು ಇತ್ಯರ್ಥವಾಗಲಿದೆ ಎಂದು ಅವರು ಮಾಹಿತಿ ನೀಡಿದರು. 

188 ಪ್ರಕರಣ ದಾಖಲು
ಕೊಡಗು ಮಕ್ಕಳ ಸಹಾಯವಾಣಿ 1098 ಸಂಖ್ಯೆಯು 24*7 ದಿನಗಳ ಕಾಲ ನಿರಂತರ ಕೆಲಸ ನಿರ್ವಹಿಸುತ್ತದೆ ಎಂದು ತಿಳಿಸಿದರು. 2018 ರ ಅಕ್ಟೋಬರ್ ನಿಂದ 2019 ರ ಮಾರ್ಚ್ ವರೆಗೆ ಶಾಲೆಗೆ ಗೈರು ಹಾಜರಾಗುತ್ತಿರುವ ಮಕ್ಕಳು 54, ಮಾನಸಿಕ ಕಿರುಕುಳ ಪ್ರಕರಣಗಳು 11, ಲೈಂಗಿಕ ದೌರ್ಜನ್ಯ ಪ್ರಕರಣಗಳು 13, ಬಾಲ ಕಾರ್ಮಿಕತೆ 13, ಕಾಣೆಯಾದ ಮಕ್ಕಳು 16, ದೈಹಿಕ ದಂಡನೆ 20, ಬಾಲ್ಯವಿವಾಹ ಪ್ರಕರಣಗಳು 9, ಆಶ್ರಯಕ್ಕೆ ಸಹಾಯ ಚಾಚಿದ ಮಕ್ಕಳು 10, ಭಿಕ್ಷಾಟನೆ ಪ್ರಕರಣಗಳು 6, ವೈದ್ಯಕೀಯ ನೆರವು ಕೋರಿದ ಮಕ್ಕಳು 7, ಆಪ್ತ ಸಮಾಲೋಚಕರ ಸಹಾಯ ಚಾಚಿದ ಮಕ್ಕಳು 20 ಹಾಗೂ ಇತರೆ 9 ಒಟ್ಟು 188 ಮಕ್ಕಳ ಪ್ರಕರಣಗಳು ಇದೆ ಎಂದು ಮುಮ್ತಾಜ್ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಸರ್ಕಾರೇತರ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಮತ್ತಿತರ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News