ಬಡವರು ಯಾಕೆ ಹಿಂದುತ್ವ ರಾಜಕಾರಣವನ್ನು ಬೆಂಬಲಿಸಿದರು?

Update: 2019-06-20 18:38 GMT

ಹಳೆಯ ಮಾದರಿಯ ರಾಜಕಾರಣದಿಂದ ಬೇಸತ್ತ, ಭ್ರಮನಿರಸನಗೊಂಡ ಬಡವರು ಹಿಂದುತ್ವದ ರಾಜಕಾರಣದಿಂದ ಆಕರ್ಷಿತರಾದರು. ಅನಿಶ್ಚಿತತೆಯ ಸಮಯದಲ್ಲಿ ಈ ಹೊಸ ರಾಷ್ಟ್ರೀಯವಾದಿ ಹುರುಪು, ಆವೇಶ ಶತ್ರುಗಳನ್ನು ಸೃಷ್ಟಿಸುತ್ತದೆ. ಮುಸ್ಲಿಮರು ಹಿಂದೂ ರಾಷ್ಟ್ರಕ್ಕೆ ಬಾಹ್ಯ ಶತ್ರುಗಳಾಗಿ ಕಾಣಿಸಿಕೊಂಡರೆ, ಕಾಲ್ಪನಿಕವಾದ ಆಂತರಿಕ ಶತ್ರುಗಳೂ ಸೃಷ್ಟಿಸಲ್ಪಟ್ಟರು: ಖಾನ್ ಮಾರ್ಕೆಟ್ ಗ್ಯಾಂಗ್, ಲುಟ್ಯನ್‌ರ ಗಣ್ಯವರ್ಗ, ನೆಹರೂ ಮತ್ತು ಸೆಕ್ಯುಲರ್‌ವಾದಿಗಳು ಮತ್ತು ‘ಟುಕ್‌ಡೇ ಟುಕ್‌ಡೇ’ ಗುಂಪು.

2019ರ ಚುನಾವಣೆಯ ಫಲಿತಾಂಶಗಳ ಕುರಿತಾಗಿ ಹಲವಾರು ವಿವರಣೆಗಳನ್ನು ನೀಡಲಾಗಿದೆ. ನರೇಂದ್ರ ಮೋದಿ ಪಂಥ, ಹಿಂದುತ್ವ ರಾಜಕಾರಣ, ಆಕ್ರಮಣಕಾರಿ ಅನ್ಯಾಕ್ರಮಣಶೀಲತೆ, ಭಾರೀ ಮೊತ್ತದ ಹಣ ಮತ್ತು ಉತ್ಪನ್ನ ಬ್ರಾಂಡಿಂಗ್‌ನಲ್ಲಿ ಮೇಲ್ಮಟ್ಟದ ಕೌಶಲ್ಯಗಳು. ಇವುಗಳಲ್ಲಿ ಹೆಚ್ಚಿನ ವಿವರಣೆಗಳು ತತ್‌ಕ್ಷಣದ ವಿದ್ಯಮಾನಗಳಿಗೆ ಸಂಬಂಧಿಸಿದವುಗಳು.

ಆದರೆ ಮತ್ತೆ ಮತ್ತೆ ಹೇಳುವ ಪ್ರಶ್ನೆ : ಬಡವರು ಯಾಕೆ ಅವರು ಮತ ಚಲಾಯಿಸಿದ ರೀತಿಯಲ್ಲೇ ಮತ ಚಲಾಯಿಸಿದರು? ಬಿಜೆಪಿಯು ಉಳ್ಳವರ, ಅನುಕೂಲಸ್ಥರ ಒಂದು ಆಯ್ಕೆಯಾಗಿ ಉಳಿದಿದೆ ಎಂಬುದನ್ನು ಚುನಾವಣೋತ್ತರ ಸಮೀಕ್ಷೆಗಳಿಂದ ಗೊತ್ತಾಗಿದೆ. ಆದರೆ ಅತ್ಯಂತ ಬಡವರಿಗೆ ಕೂಡ ಅದರ ಜನಪ್ರಿಯತೆ ಹೆಚ್ಚಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಸರಕಾರದ ಹಲವಾರು ಯೋಜನೆಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ: ಉಜ್ವಲಾ, ಶೌಚಾಲಯಗಳು, ಗ್ರಾಮೀಣ ವಿದ್ಯುದೀಕರಣ ಇತ್ಯಾದಿ.

ಹಾಗಾದರೆ ಬಡವರ ಬೆಂಬಲ ಪಡೆಯಲು ಕೇವಲ ಒಂದಷ್ಟು ಮೂಲ ಸೌಕರ್ಯಗಳನ್ನು ಮತ್ತು ರಿಯಾಯಿತಿಗಳನ್ನು ನೀಡಿದರೆ ಸಾಕೇ! ಬಡವರ ರಾಜಕೀಯ ಪ್ರಜ್ಞೆ ಅಷ್ಟೊಂದು ದುರ್ಬಲವೇ?

ಒಂದು ಸುಳ್ಳು ಪ್ರಜ್ಞೆ ಸಿದ್ಧ್ದಾಂತವನ್ನು ಮುಂದಿಡಲಾಗಿದೆ: ಬಡವರು ತಮ್ಮ ಮನಸ್ಸಿನಂತೆಯೋ, ಇಷ್ಟದಂತೆಯೋ ಮತ ಚಲಾಯಿಸಿದರು, ಆದರೆ ಮೂಲಭೂತವಾಗಿ ಸ್ವತಃ ತಮ್ಮದೇ ಹಿತಾಸಕ್ತಿಯ ವಿರುದ್ಧವಾಗಿ ಮತೀಯ ದ್ವೇಷ ಮತ್ತು ಯುದ್ಧಗಳಿಗೆ ಶರಣಾಗಿ ಮತ ನೀಡಿದರು. ಹೀಗೆ ಬಡವರ ರಾಜಕೀಯ ವರ್ತನೆಯನ್ನು ಮುಗ್ಧತೆ ಮತ್ತು ಅಜ್ಞಾನದ ಒಂದು ಮಿಶ್ರಣವೆಂದು ಪರಿಗಣಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ನಿರುದ್ಯೋಗ, ನೋಟು ರದ್ದತಿ ತಂದ ಸಮಸ್ಯೆಗಳು, ರೈತರ ಸಂಕಷ್ಟ ಮತ್ತು ಸಾಲ ಅಥವಾ ಚಿಕ್ಕಪುಟ್ಟ ವ್ಯಾಪಾರೋದ್ಯಮಗಳಿಗೆ ಹೊಡೆತ ನೀಡಿದ ಜಿಎಸ್‌ಟಿ ಮುಂತಾದ ‘ನಿಜವಾದ’ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ವಿಪಕ್ಷಗಳ ತಂತ್ರವಾಗಿತ್ತು. ಪರಿಣಾಮವಾಗಿ ಚುನಾವಣೆಗಳು ‘ವಾಸ್ತವಿಕ’ ಮತ್ತು ‘ಕಾಲ್ಪನಿಕ’ ವಿಷಯಗಳ ನಡುವೆ ನಡೆದ ಒಂದು ಹೋರಾಟದ ಸಂಕೇತವಾಗಿದ್ದವು. ಇದರಲ್ಲಿ ‘ಕಾಲ್ಪನಿಕ’ವೇ ವಿಜಯ ಸಾಧಿಸಿತು.

ಸಾಮಾಜಿಕ, ರಾಜಕೀಯ ಪ್ರಕ್ರಿಯೆಗಳು

‘ವಾಸ್ತವಿಕ’ ಮತ್ತು ‘ಕಾಲ್ಪನಿಕ’ಗಳನ್ನು ನೋಡಿದಾಗ ನಾವು ಕಳೆದ ಕೆಲವು ವರ್ಷಗಳಲ್ಲಿ ಕಾಣಿಸಿಕೊಂಡ ಸಾಮಾಜಿಕ ಹಾಗೂ ರಾಜಕೀಯ ಪ್ರಕ್ರಿಯೆಗಳನ್ನು ಪರಿಗಣಿಸಲೇಬೇಕಾಗುತ್ತದೆ. ವಿಪಕ್ಷ ರಾಜಕಾರಣ ಇಂದು ತೀವ್ರ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಸಾಂಪ್ರದಾಯಿಕವಾಗಿ, ರಾಜಕಾರಣದ ಮೂರು ಮುಖ್ಯ ಧಾರೆಗಳು ಸಮಸ್ಯಾ ಪರಿಹಾರಕ ತಂತ್ರಗಳನ್ನು ಪೂರೈಸಲು ಪೈಪೋಟಿ ನಡೆಸಿವೆ. ಪ್ರತಿಯೊಂದು ಧಾರೆಯೂ ಒಂದು ಆದರ್ಶವನ್ನು ಕನಸಿನ ರಾಜ್ಯವನ್ನು ನೀಡಲು ಪ್ರಯತ್ನಿಸಿದೆ. ಸ್ವಾತಂತ್ರೋತ್ತರ ಕಾಂಗ್ರೆಸ್ ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯನ್ನು ಒಟ್ಟು ಗೂಡಿಸಿತು. ಅದರ ಯಶಸ್ಸು ಸೀಮಿತವಾಗಿತ್ತು. ಕಮ್ಯುನಿಸ್ಟರು ಕಾರ್ಮಿಕ ವರ್ಗದ ಚಳವಳಿಯನ್ನು ಮುನ್ನೆಲೆಗೆ ತರುವಲ್ಲಿ ಮುಖ್ಯ ಪಾತ್ರವಹಿಸಿದರು, ಆದರೆ ಅವರು ಭಾರತೀಯ ಅರ್ಥವ್ಯವಸ್ಥೆಯ ಮುಖ್ಯ ಭಾಗವಾಗಿರುವ ಅಸಾಂಪ್ರದಾಯಿಕ, ಅಸಂಘಟಿತ (ಇನ್‌ಫಾರ್ಮರ್) ರಂಗವನ್ನು ಬಹುಪಾಲು ಕಡೆಗಣಿಸಿದರು. ಅವರಿಗೆ ಮಹತ್ವಪೂರ್ಣ ಗೆಲುವು ಲಭಿಸಿತಾದರೂ, ಅದಕ್ಕಾಗಿ ಬಹಳ ಬೆಲೆತೆರಬೇಕಾಯಿತು. ಆಕರ್ಷಣೆಯ ಮೊದಲ ಹಂತದ ಬಳಿಕ, ಬಡವರು ಪ್ರೇಕ್ಷಕರಾಗಿ ನಿಂತರು.

ತನ್ನ ವೈಭವದ ಹಂತದಲ್ಲಿ ಸಾಮಾಜಿಕ ನ್ಯಾಯದ ಭಿತ್ತಿಪತ್ರ ಬಡವರಿಗೆ ಭರವಸೆ ನೀಡಿತು. ಬಡವರು ಕಳೆದುಕೊಂಡ ಸ್ಥಾನಮಾನ ಮತ್ತು ಜಾತಿ ತಾರತಮ್ಯದ ಸಮಸ್ಯೆಗೆ ಅದು ಪರಿಹಾರವಾಗಿ ಕಂಡಿತು. ಬಡವರಿಗೆ ತಮ್ಮ ದೈನಂದಿನ ಅವಮಾನ ಮತ್ತು ಬಡತನದಿಂದ ಬಿಡುಗಡೆ ಬೇಕಾಗಿತ್ತು. ಆದರೆ, ಕ್ರಮೇಣ ಅವರ ಭರವಸೆಗಳು ಹತಾಶೆಯಲ್ಲಿ ಕೊನೆಗೊಂಡವು. ಭಾರತದ ಬಹುಪಾಲು ಬಡವರ ಅಪಾಯಕಾರಿ ಅಸ್ತಿತ್ವದಲ್ಲಿ, ದೈನಿಕ ಬದುಕಿನಲ್ಲಿ ಬಹಳ ಬದಲಾವಣೆ ಏನೂ ಕಾಣಿಸಲಿಲ್ಲ. ಅಸಮಾನತೆ ಏರುತ್ತಲೇ ಹೋಯಿತು. ಅದೇ ವೇಳೆ, ಮಧ್ಯಮ ವರ್ಗದ ಸದಸ್ಯರ ಸಂಖ್ಯೆಯಲ್ಲಿ ಏರಿಕೆಯಾಯಿತಾದರೂ, ವಿಸ್ತಾರಗೊಂಡ ಮಧ್ಯಮ ವರ್ಗದಲ್ಲಿ ಕೆಳ ಮಧ್ಯಮ ವರ್ಗವೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು. ಈ ವರ್ಗದವರ ದೈನಿಕ ಆದಾಯ ಕೇವಲ 2-4 ಡಾಲರ್ (ರೂ.140-280).

ಇವೆಲ್ಲದರ ಪರಿಣಾಮವಾಗಿ, ಹಳೆಯ ಮಾದರಿಯ ರಾಜಕಾರಣದಿಂದ ಬೇಸತ್ತ, ಭ್ರಮನಿರಸನಗೊಂಡ ಬಡವರು ಹಿಂದುತ್ವದ ರಾಜಕಾರಣದಿಂದ ಆಕರ್ಷಿತರಾದರು. ಅನಿಶ್ಚಿತತೆಯ ಸಮಯದಲ್ಲಿ ಈ ಹೊಸ ರಾಷ್ಟ್ರೀಯವಾದಿ ಹುರುಪು, ಆವೇಶ ಶತ್ರುಗಳನ್ನು ಸೃಷ್ಟಿಸುತ್ತದೆ. ಮುಸ್ಲಿಮರು ಹಿಂದೂ ರಾಷ್ಟ್ರಕ್ಕೆ ಬಾಹ್ಯ ಶತ್ರುಗಳಾಗಿ ಕಾಣಿಸಿಕೊಂಡರೆ, ಕಾಲ್ಪನಿಕವಾದ ಆಂತರಿಕ ಶತ್ರುಗಳೂ ಸೃಷ್ಟಿಸಲ್ಪಟ್ಟರು: ಖಾನ್ ಮಾರ್ಕೆಟ್ ಗ್ಯಾಂಗ್, ಲುಟ್ಯನ್‌ರ ಗಣ್ಯವರ್ಗ, ನೆಹರೂ ಮತ್ತು ಸೆಕ್ಯುಲರ್‌ವಾದಿಗಳು ಮತ್ತು ‘ಟುಕ್‌ಡೇ ಟುಕ್‌ಡೇ’ ಗುಂಪು.

ಮುಸ್ಲಿಮರು ವೈಯಕ್ತಿಕವಾದ ಹಿಂಸೆಗೆ ಗುರಿಯಾದರೆ, ಕಾಲ್ಪನಿಕ ಶತ್ರುಗಳು ಇದರಿಂದ ಬಚಾವಾದರು. ಬಡವರಿಗೆ ಓರ್ವ ಮುಸ್ಲಿಮ್ ಕಾರ್ಮಿಕ ಮಾರುಕಟ್ಟೆಯಲ್ಲಿ ಒಬ್ಬ ಪ್ರತಿಸ್ಪರ್ಧಿ; ಆದರೆ ಈ ಕಾಲ್ಪನಿಕ ಶತ್ರು ಶೋಷಕ ಹಾಗೂ ಎಲ್ಲ ಸವಲತ್ತುಗಳನ್ನು ಬಾಚಿಕೊಳ್ಳುವವ. ಈ ರಾಜಕಾರಣವು ಒಂದು ಹೊಸ ಆದರ್ಶ ರಾಜ್ಯವಾಗಿ ಕಾಣುವ ಹಿಂದೂ ರಾಷ್ಟ್ರದಲ್ಲಿ ಕಾಲ್ಪನಿಕವಾದ ಸಮಾನಾಂತರ ಗೆಳೆತನವನ್ನು (ಕಾಮ್ರೇಡ್‌ಶಿಪ್) ಒಂದು ಕೊಡುಗೆಯಾಗಿ ನೀಡುತ್ತದೆ.

(ಲೇಖಕರು ದಿಲ್ಲಿಯ ಜೆಎನ್‌ಯುನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ.)

www.thehindubusinessline.com

Writer - ತನ್ವೀರ್ ಫಝಲ್

contributor

Editor - ತನ್ವೀರ್ ಫಝಲ್

contributor

Similar News