ತೆಂಗಿನ ಗರಿ ನಿರುಪಯುಕ್ತ ತ್ಯಾಜ್ಯವಾಗದಿರಲಿ

Update: 2019-06-20 18:39 GMT

ಮಾನ್ಯರೇ,

ನಗರ ಪ್ರದೇಶಗಳಲ್ಲಿ 5 ಅಥವಾ 3 ಸೆಂಟ್ಸ್ ನಿವೇಶನಗಳ ಜನವಸತಿ ಬಡಾವಣೆಗಳು ಸಾಮಾನ್ಯವಾಗಿ ಇರುತ್ತವೆ. ಮನೆಯ ವಠಾರದಲ್ಲಿ ನಿತ್ಯದ ಬಳಕೆಗೆ ಸಿಗಲೆಂದು ಕೆಲವು ತೆಂಗಿನ ಮರಗಳನ್ನು ಆಯಕಟ್ಟಿನ ಸ್ಥಳದಲ್ಲಿ ಬೆಳೆಸಿರುತ್ತಾರೆ. ಅವುಗಳ ಮಡಲು(ಗರಿ)ಗಳು ಒಣಗಿ ಉದುರಿ ಬಿದ್ದಾಗ, ಮನೆ ಮಂದಿ ಮಡಲನ್ನು ರಸ್ತೆಯ ಬದಿಯಲ್ಲಿ ತ್ಯಾಜ್ಯ ಎಂದು ಎಸೆದು ಬಿಡುತ್ತಾರೆ. ಅದೇ ಹಳ್ಳಿಯಲ್ಲಾದರೆ ಉರುವಲಾಗಿಯೋ, ಚಪ್ಪರ ಕಟ್ಟಲೋ ಮತ್ತಿತರ ಅಗತ್ಯಗಳಿಗೆ ಬಳಸುತ್ತಾರೆ. ನಗರ ಪ್ರದೇಶದಲ್ಲಿ ಕಟ್ಟಿಗೆ ಉರುವಲು ಬಳಸದಿರುವುದರಿಂದ ತೆಂಗಿನ ಗರಿಗಳೆಲ್ಲವೂ ತ್ಯಾಜ್ಯರೂಪ ಪಡೆಯುತ್ತಿವೆ. ಹಾಗಾಗಿ ರಸ್ತೆ ಪಕ್ಕ ಎಸೆದು ಬಿಡುತ್ತಾರೆ. ಅಲ್ಲಿ ತೆಂಗಿನ ಗರಿಗಳೆಲ್ಲವೂ ಕೊಳೆತು ಸೊಳ್ಳೆ ಉತ್ಪತ್ತಿಯಾಗಲು, ರಸ್ತೆಯ ಸೌಂದರ್ಯ ಕೆಡಲು, ಉರಗಾದಿ ವಿಷಜಂತುಗಳಿಗೆ ಅಡಗುದಾಣವಾಗಲು ಕಾರಣವಾಗುತ್ತದೆ. ನಗರದ ಬಡಾವಣೆಗಳಲ್ಲಿ ಸಂಚರಿಸಿದಾಗ ರಸ್ತೆಯುದ್ದಕ್ಕೂ ಸಾರ್ವಜನಿಕರು ಎಸೆದ ತೆಂಗಿನ ಗರಿಗಳು ಸಾಲು ಸಾಲಾಗಿ ಕಾಣಲು ಸಿಗುತ್ತವೆ. ಸ್ಥಳೀಯಾಡಳಿತಗಳು ಅದರ ವಿಲೇವಾರಿ ಕಾರ್ಯವನ್ನೂ ಮಾಡುವುದು ಕಡಿಮೆ. ಪರಿಸರದ ಸ್ವಚ್ಛತೆಯ ರಕ್ಷಣೆಯ ಹಿತದೃಷ್ಟಿಯಿಂದ ತೆಂಗಿನ ಗರಿಯನ್ನು ತ್ಯಾಜ್ಯವಾಗಿಸದೆ, ಸಂಪನ್ಮೂಲವಾಗಿಸಲು ಸಾಧ್ಯ ಇದೆ. ತೆಂಗಿನ ಮರದ ಬುಡದ ಸುತ್ತಲೂ ಗುಂಡಿ ತೋಡಿ, ಗುಂಡಿಯೊಳಗೆ ಮಡಲನ್ನು ಕತ್ತಿಯಿಂದ ಸವರಿ ಹಾಕಿ ಮಳೆಗಾಲದ ಸಂದರ್ಭ ಮುಚ್ಚಿದರಾಯಿತು. ಮರಕ್ಕೂ ಜೈವಿಕ ಪೌಷ್ಟಿಕ ಗೊಬ್ಬರ ಸಿಗುತ್ತದೆ. ತ್ಯಾಜೋತ್ಪತ್ತಿಗೂ ತಡೆಯೊಡ್ಡ ಬಹುದು. ಅಲ್ಲದೆ ಗರಿಗಳಿಂದ ಕಡ್ಡಿಗಳನ್ನು ಬೇರ್ಪಡಿಸಿ ಕಸಬರಿಕೆ ತಯಾರಿಸಲು ಸಾಧ್ಯವಿದೆ. ಅದರಿಂದ ಉಳಿದ ತ್ಯಾಜ್ಯಗಳನ್ನು ಮರದ ಬುಡಕ್ಕೆ ಹಾಕಬಹುದು. ಈ ಪ್ರಕ್ರಿಯೆಗಳು ಕೆಲವರಿಗೆ ಶ್ರಮದಾಯಕ, ಸಮಯಾವಕಾಶ ಇಲ್ಲದ ಸಮಸ್ಯೆಗಳಿದ್ದರೆ, ಮಡಲನ್ನು ಸಂಗ್ರಹಿಸಿಟ್ಟು ಹತ್ತಿರದ ಹಿಂದೂ ರುದ್ರಭೂಮಿಗಳಿಗೂ ನೀಡಲು ಸಾಧ್ಯವಿದೆ. ಈ ಮೂಲಕ ತೆಂಗಿನ ಮಡಲನ್ನು ತ್ಯಾಜವಾಗಿಸದೆ ಅಮೂಲ್ಯವಾಗಿಸಬಹುದು. ಪರಿಸರದ ರಕ್ಷಣೆಯನ್ನು ಮಾಡಬಹುದು.

-ತಾರಾನಾಥ್ ಮೇಸ್ತ, ಶಿರೂರು

Writer - -ತಾರಾನಾಥ್ ಮೇಸ್ತ, ಶಿರೂರು

contributor

Editor - -ತಾರಾನಾಥ್ ಮೇಸ್ತ, ಶಿರೂರು

contributor

Similar News