ಇಂದು ಇಂಗ್ಲೆಂಡ್‌ಗೆ ಲಂಕಾ ಎದುರಾಳಿ

Update: 2019-06-20 18:41 GMT

ಲೀಡ್ಸ್, ಜೂ.20: ಆತಿಥೇಯ ಇಂಗ್ಲೆಂಡ್ ತಂಡ ಶುಕ್ರವಾರ ಹೆಡ್ಡಿಂಗ್ಲೆಯಲ್ಲಿ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ದಕ್ಷಿಣ ಆಫ್ರಿಕ ವಿರುದ್ಧ ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿರುವ ನ್ಯೂಝಿಲ್ಯಾಂಡ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರೆ, ಅಫ್ಘಾನಿಸ್ತಾನ ವಿರುದ್ಧ 150 ರನ್‌ಗಳಿಂದ ಜಯ ಸಾಧಿಸಿ ನಂ.1 ಸ್ಥಾನಕ್ಕೇರಿದ್ದ ಇಂಗ್ಲೆಂಡ್ ತಂಡ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದೆ.

ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ಧ ಕಳೆದ ವಿಶ್ವಕಪ್ ಪಂದ್ಯದ ವೇಳೆ ಹಲವು ದಾಖಲೆಗಳನ್ನು ಮುರಿದಿತ್ತು. ಮತ್ತೊಂದೆಡೆ, ಶ್ರೀಲಂಕಾ ತಂಡ ಈಗ ನಡೆಯುತ್ತಿರುವ ಟೂರ್ನಮೆಂಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿದೆ. ಡಿಮುತ್ ಕರುಣರತ್ನೆ ನೇತೃತ್ವದ ಶ್ರೀಲಂಕಾ 3 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ಎರಡು ಪಂದ್ಯಗಳು ಒಂದೂ ಎಸೆತ ಕಾಣದೇ ಮಳೆಗಾಹುತಿಯಾಗಿವೆ.

 ಶ್ರೀಲಂಕಾ ವಿಶ್ವಕಪ್‌ನಲ್ಲಿ ಸ್ಪರ್ಧೆಯಲ್ಲಿರುವ ವಿಶ್ವಾಸವನ್ನು ಜೀವಂತವಾಗಿರಿಸಬೇಕಾದರೆ ಅಸಾಮಾನ್ಯ ಪ್ರದರ್ಶನ ನೀಡಬೇಕಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಇಂಗ್ಲೆಂಡ್‌ಗೆ ಚಿಂತೆಯ ವಿಚಾರವಾಗಿ ಕಾಡಿದ್ದು ಬೌಲಿಂಗ್ ವಿಭಾಗ. ಇಂಗ್ಲೆಂಡ್ ತಂಡದ ಬೌಲರ್‌ಗಳು ಸಾಮಾನ್ಯ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಅಫ್ಘಾನಿಸ್ತಾನವನ್ನು ಆಲೌಟ್ ಮಾಡಲು ವಿಫಲರಾಗಿದ್ದರು. ಆದಾಗ್ಯೂ, ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಉತ್ತಮ ಟಚ್‌ನಲ್ಲಿದ್ದಾರೆ. ಇಂಗ್ಲೆಂಡ್‌ನ ನಾಲ್ವರು ದಾಂಡಿಗರಾದ ಜೋ ರೂಟ್, ಇಯಾನ್ ಮೊರ್ಗನ್, ಜಾನಿ ಬೈರ್‌ಸ್ಟೋವ್ ಹಾಗೂ ಜೇಸನ್ ರಾಯ್ ಈತನಕ ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಅಗ್ರ-10 ದಾಂಡಿಗರ ಪಟ್ಟಿಯಲ್ಲಿದ್ದಾರೆ. ವಿಭಿನ್ನ ದರ್ಜೆಯ ಬೌಲರ್‌ಗಳಾದ ಲಸಿತ್ ಮಾಲಿಂಗ ಹಾಗೂ ನುವಾನ್ ಪ್ರದೀಪ್ ದಾಳಿಯನ್ನು ಇಂಗ್ಲೆಂಡ್ ಎದುರಿಸಲು ಸಜ್ಜಾಗಬೇಕಾಗಿದೆ. ಶ್ರೀಲಂಕಾದ ಬೌಲಿಂಗ್ ವಿಭಾಗದಲ್ಲಿ ಮಾಲಿಂಗ ಹಾಗೂ ಪ್ರದೀಪ್ ಪ್ರಮುಖ ಅಸ್ತ್ರವಾಗಿದ್ದಾರೆ. ಈ ಇಬ್ಬರು ಬೌಲರ್‌ಗಳು ಲಂಕಾ ಆಡಿರುವ 3 ಪಂದ್ಯಗಳಲ್ಲಿ ತಲಾ 4 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

► ಪಂದ್ಯದ ಸಮಯ: ಮಧ್ಯಾಹ್ನ 3:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News