4 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

Update: 2019-06-21 12:41 GMT

ಬೆಂಗಳೂರು, ಜೂ.21: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ ಎಸಿಬಿ ತನಿಖಾಧಿಕಾರಿಗಳು, ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಸೇರಿದಂತೆ ರಾಜ್ಯದ ನಾಲ್ಕು ಅಧಿಕಾರಿಗಳ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿ, ಆಸ್ತಿ ಸಂಬಂಧ ದಾಖಲೆ ಪತ್ರಗಳನ್ನು ಶುಕ್ರವಾರ ಜಪ್ತಿ ಮಾಡಿದ್ದಾರೆ.

ಜಂಟಿ ಆಯುಕ್ತ: ವಿಭಾಗೀಯ ಸರಕು ಮತ್ತು ಸೇವಾ ಕಚೇರಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಂ.ಬಿ.ನಾರಾಯಣಸ್ವಾಮಿ ಅವರ ಜಯನಗರದಲ್ಲಿನ ಮನೆ, ಹಾಗೂ ಇವರ ಸಂಬಂಧಿಕರಿಗೆ ಸೇರಿದ ನಾಯಕ ನಗರ ಮೇಡಹಳ್ಳಿಯಲ್ಲಿನ ಮನೆ, ಕೋಲಾರದಲ್ಲಿ ಎರಡು ಮನೆಗಳು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿರುವ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ವಾಣಿಜ್ಯ ತೆರಿಗೆಗಳ ವಿಭಾಗೀಯ ಸರಕು ಮತ್ತು ಸೇವಾ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ರಾಮನಗರ ಜಿಲ್ಲೆಯ(ಬೆಂಗಳೂರು ಮಿಲ್ಕ್ ಯೂನಿಯನ್) ಬಮೂಲ್ ಉಪ ವ್ಯವಸ್ಥಾಪಕ ಡಾ.ಶಿವಶಂಕರ್ ಅವರ ಅರ್ಕಾವತಿ ಬಡಾವಣೆ ನಿವಾಸ. ದೊಡ್ಡಬಳ್ಳಾಪುರದಲ್ಲಿನ ವಾಸದ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಉಪ ವ್ಯವಸ್ಥಾಪಕರ ಕಚೇರಿ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಯಿತು.

ಮೈಸೂರಿನ ಪಿರಿಯಾಪಟ್ಟಣ ಉಪ ವಿಭಾಗ ಪಂಚಾಯತ್ ರಾಜ್ ಇಲಾಖೆ ಸಹಾಯಕ ಅಭಿಯಂತರ ಆರ್ಶದ್ ಪಾಷಾ ಅವರ ಉದಯಗಿರಿಯಲ್ಲಿನ ವಾಸದ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಹಾಸನ ವಿಶೇಷ ವಿಭಾಗದ ಪಿಡಬ್ಲ್ಯೂಡಿ ಇಲಾಖೆ ಸಹಾಯಕ ಅಭಿಯಂತರ ಎಚ್.ಎಸ್.ಚೆನ್ನೇಗೌಡ ಅವರ ಹೇಮಾವತಿ ನಗರದ ನಿವಾಸ ಮತ್ತು ಹಾಸನ ನಗರದಲ್ಲಿನ ಇವರ ಸಂಬಂಧಿಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಮುಂದುವರೆಸಲಾಗಿದೆ.

ದಾಳಿ ಪ್ರಕರಣ ಸಂಬಂಧ ಆಯಾ ಎಸಿಬಿ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ದಾಖಲಿಸಿ, ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News