ಏಕಕಾಲದಲ್ಲಿ ತೆಂಡುಲ್ಕರ್, ಲಾರಾ ವಿಶ್ವ ದಾಖಲೆ ಮುರಿಯುವ ಹಾದಿಯಲ್ಲಿ ವಿರಾಟ್ ಕೊಹ್ಲಿ

Update: 2019-06-21 06:10 GMT

ಹೊಸದಿಲ್ಲಿ, ಜೂ.21: ಭಾರತ ನಾಯಕ ವಿರಾಟ್ ಕೊಹ್ಲಿ ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ದಾಖಲೆಗಳನ್ನು ಮುರಿಯುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಕೊಹ್ಲಿ ಅವರು ತೆಂಡುಲ್ಕರ್ ಹೆಸರಲ್ಲಿರುವ ಸಣ್ಣ ಹಾಗೂ ದೊಡ್ಡ ದಾಖಲೆಯನ್ನು ಮುರಿಯುತ್ತಿದ್ದಾರೆ. ಐಸಿಸಿ ವಿಶ್ವಕಪ್‌ನಲ್ಲೂ ಈ ಕಾಯಕ ಮುಂದುವರಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ರವಿವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ವೇಗದ 11,000 ರನ್ ಪೂರೈಸುವುದರೊಂದಿಗೆ ತೆಂಡುಲ್ಕರ್ ದಾಖಲೆಯೊಂದನ್ನು ಮುರಿದಿದ್ದರು. ಭಾರತ ಶನಿವಾರ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಅವರು ತೆಂಡುಲ್ಕರ್‌ರ ಮತ್ತೊಂದು ದಾಖಲೆ ಪತನಗೊಳಿಸಿ ಮತ್ತೊಂದು ವಿಶ್ವದಾಖಲೆ ನಿರ್ಮಿಸುವ ಅವಕಾಶ ಅಧಿಕವಿದೆ.

ಕೊಹ್ಲಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಪೂರೈಸಲು ಕೇವಲ 104 ರನ್ ಅಗತ್ಯವಿದೆ. ಅಫ್ಘಾನ್ ವಿರುದ್ಧ ಕೊಹ್ಲಿ 104ಕ್ಕೂ ಅಧಿಕ ರನ್ ಗಳಿಸಿದರೆ 20,000 ರನ್ ಪೂರೈಸಿದ ವಿಶ್ವದ 12ನೇ ಹಾಗೂ ಸಚಿನ್ ತೆಂಡುಲ್ಕರ್(34,357 ರನ್) ಹಾಗೂ ರಾಹುಲ್ ದ್ರಾವಿಡ್(24,208 ರನ್)ಬಳಿಕ ಈ ಸಾಧನೆ ಮಾಡಿದ ಭಾರತದ 2ನೇ ದಾಂಡಿಗ ಎನಿಸಿಕೊಳ್ಳಲಿದ್ದಾರೆ.

 ಕೊಹ್ಲಿ ಏಕದಿನದಲ್ಲಿ 11,020 ರನ್, ಟೆಸ್ಟ್‌ನಲ್ಲಿ 6,613 ಹಾಗೂ ಟಿ-20ಯಲ್ಲಿ 2,263 ರನ್ ಗಳಿಸಿದ್ದಾರೆ. ಕೊಹ್ಲಿ ಈತನಕ ಕೇವಲ 415 ಇನಿಂಗ್ಸ್(ಟೆಸ್ಟ್-131, ಏಕದಿನ-222, ಟಿ-20 62)ಆಡಿದ್ದು, ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್‌ನಲ್ಲಿ ಕಡಿಮೆ ಇನಿಂಗ್ಸ್‌ನಲ್ಲಿ 20,000 ಅಂತರ್‌ರಾಷ್ಟ್ರೀಯ ರನ್ ಪೂರೈಸಿ ಏಕಕಾಲದಲ್ಲಿ ತೆಂಡುಲ್ಕರ್ ಹಾಗೂ ವಿಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರ ಜಂಟಿ ವಿಶ್ವ ದಾಖಲೆಯೊಂದನ್ನು ಮುರಿಯಲಿದ್ದಾರೆ. ತೆಂಡುಲ್ಕರ್ ಹಾಗೂ ಲಾರಾ ತಲಾ 453 ಇನಿಂಗ್ಸ್ ಗಳಲ್ಲಿ 20,000 ಅಂತರ್‌ರಾಷ್ಟ್ರೀಯ ರನ್ ಪೂರೈಸಿದ್ದರು.

ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ 468 ಇನಿಂಗ್ಸ್‌ನಲ್ಲಿ 20 ಸಾವಿರ ರನ್ ಪೂರೈಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯ ಹಾಗೂ ಪಾಕಿಸ್ತಾನದ ವಿರುದ್ಧ 82 ಹಾಗೂ 77 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಫ್ಘಾನ್ ವಿರುದ್ಧ ಶನಿವಾರ ಮೂರಂಕೆಯನ್ನು ದಾಟುವ ಸಾಧ್ಯತೆಯಿದೆ. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಎಂ.ಎಸ್. ಧೋನಿ ಹಾಗೂ ಹಾರ್ದಿಕ್ ಪಾಂಡ್ಯಗೆ ದೊಡ್ಡ ಮೊತ್ತ ಗಳಿಸಲು ಭದ್ರಬುನಾದಿ ಹಾಕಿಕೊಡುವ ಮಹತ್ವದ ಜವಾಬ್ದಾರಿ ಕೊಹ್ಲಿ ಹೆಗಲೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News