ಐಟಿ ಇಲಾಖೆ, ಈ.ಡಿ., ಸಿಬಿಐ ತನಿಖೆ ಎದುರಿಸುತ್ತಿದ್ದಾರೆ ಬಿಜೆಪಿ ಸೇರಿದ ಟಿಡಿಪಿ ಸಂಸದರು

Update: 2019-06-21 08:33 GMT

ಹೊಸದಿಲ್ಲಿ, ಜೂ.21: ತೆಲುಗುದೇಶಂ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರಗೊಂಡ ನಾಲ್ವರು ಸಂಸದರ ಪೈಕಿ ಇಬ್ಬರು ಕೈಗಾರಿಕೋದ್ಯಮಿಗಳೂ ಇದ್ದು, ಇವರು ಐಟಿ ಇಲಾಖೆ, ಸಿಬಿಐ ಮತ್ತು ಕಾನೂನು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದಾರೆ.

ಸಿ.ಎಂ. ರಮೇಶ್ ಮತ್ತು ವೈ.ಎಸ್. ಚೌಧರಿ ಅವರು ಗುರುವಾರ ಬಿಜೆಪಿ ಸೇರಿದ್ದರು.

ರಮೇಶ್ ಅವರ ಹೆಸರು ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ನಡುವಿನ ಗುದ್ದಾಟದ ವೇಳೆ ಕೇಳಿಬಂದಿತ್ತು. ಅವರಿಗೆ ಸೇರಿದ್ದು ಎನ್ನಲಾದ ಕಂಪನಿ ವಿರುದ್ಧ ಆದಾಯ ತೆರಿಗೆ ಇಲಾಖೆ ವಿಚಾರಣೆಯೂ ನಡೆಯುತ್ತಿದೆ. ಚೌಧರಿಯವರು ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಕಾನೂನು ಜಾರಿ ನಿರ್ದೇಶನಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಮೊದಲು ಇಬ್ಬರೂ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ತಾವು ಅಮಾಯಕರು ಎಂದು ಹೇಳಿಕೊಂಡಿದ್ದರು. ಕಳೆದ ನವೆಂಬರ್‍ನಲ್ಲಿ ಬಿಜೆಪಿ ಸಂಸದ ಹಾಗೂ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರು, ಚೌಧರಿ ಹಾಗೂ ರಮೇಶ್ ಅವರನ್ನು ‘ಆಂಧ್ರದ ಮಲ್ಯರು’ ಎಂದು ಕರೆದಿದ್ದರು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ರಾಜ್ಯಸಭೆಯ ನೈತಿಕ ಸಮಿತಿಗೆ ಪತ್ರ ಬರೆದಿದ್ದರು. ಆದರೆ ವಿಪರ್ಯಾಸವೆಂದರೆ ಈ ಇಬ್ಬರನ್ನೂ ಇದೀಗ ಬಿಜೆಪಿ ಬರಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News