ಗುಜರಾತ್ ಸರಕಾರಕ್ಕೆ ಹೀರೊ ಆಗಿದ್ದ ಸಂಜೀವ್ ಭಟ್ ಒಂದೇ ದಿನದಲ್ಲಿ ವಿಲನ್ ಆಗಿದ್ದು ಹೀಗೆ…

Update: 2019-06-21 12:58 GMT

29 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಗುರುವಾರ ಜಾಮ್ನಗರ್ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಪೊಲೀಸ್ ವಶದಲ್ಲಿದ್ದ ವ್ಯಕ್ತಿಯೊಬ್ಬನ ಸಾವಿನ ಪ್ರಕರಣದ ತನಿಖೆಯಲ್ಲಿ ಸಂಬಂಧಿಸಿದ ಪೊಲೀಸರಿಗೆ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕಡಿಮೆ ಇರುವ ಭಾರತದಲ್ಲಿ ಈ ಪ್ರಕರಣದ ವಿಚಾರಣೆ ನಡೆದ ರೀತಿ ಹಾಗು ಪ್ರಕಟವಾಗಿರುವ ತೀರ್ಪು ಭಾರೀ ಅಚ್ಚರಿ ಮೂಡಿಸಿದೆ. 

ಅದಕ್ಕಿಂತಲೂ ಅಚ್ಚರಿಯ ವಿಷಯವೆಂದರೆ 2011 ರವರೆಗೆ ಇದೇ ಗುಜರಾತ್ ಸರಕಾರ ಈ ಪ್ರಕರಣದಲ್ಲಿ ಸಂಜೀವ್ ಭಟ್ ಬೆನ್ನಿಗೆ ನಿಂತು ರಕ್ಷಿಸಿತ್ತು. 2011 ರಲ್ಲಿ ನಡೆದ ಒಂದು ಘಟನೆ ಎಲ್ಲವನ್ನೂ ಬದಲಿಸಿಬಿಟ್ಟಿತು. ಗುರುವಾರ ಸಂಜೀವ್ ಭಟ್ ರನ್ನು ಜೀವಾವಧಿ ಶಿಕ್ಷೆ ಎದುರಿಸುವ ಹಂತಕ್ಕೆ ತಂದು ನಿಲ್ಲಿಸಿತು. ಈ ಬಗ್ಗೆ ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಭಟ್ ಅವರು ಗುರುವಾರ ರಾತ್ರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಹಲವು ಮಹತ್ವದ ಅಂಶಗಳನ್ನು ಮತ್ತೆ ಬಯಲು ಮಾಡಿದೆ.

ಅದರ  ಮುಖ್ಯಾಂಶಗಳು ಹೀಗಿವೆ

1990ರಲ್ಲಿ ಸಂಜೀವ್ ಭಟ್ ಜಾಮ್ನಗರ್ ಗ್ರಾಮಾಂತರ ವಿಭಾಗದ ಎಎಸ್ಪಿ ಆಗಿದ್ದರು. ಜಿಲ್ಲೆಯ ಉಳಿದೆರಡು ವಿಭಾಗಗಳ ಎಎಸ್ಪಿಗಳು ರಜೆ ಮೇಲೆ ಹೋಗಿದ್ದರಿಂದ ಆ ಎರಡು ವಿಭಾಗಗಳ ಹೆಚ್ಚುವರಿ ಹೊಣೆಯನ್ನು ಸಂಜೀವ್ ಭಟ್ ಅವರಿಗೆ ವಹಿಸಲಾಗಿತ್ತು. ಇದೇ ಸಂದರ್ಭದಲ್ಲಿ ರಥಯಾತ್ರೆ ಹೊರಟಿದ್ದ ಅಡ್ವಾಣಿಯವರನ್ನು ಬಿಹಾರದಲ್ಲಿ ತಡೆದು ಬಂಧಿಸಲಾಗಿತ್ತು. ಅದನ್ನೇ ನೆಪ ಮಾಡಿಕೊಂಡು ಜಾಮ್ನಗರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿದರು. ಮುಸ್ಲಿಮರ ಮೇಲೆ ಹಲ್ಲೆ, ಮುಸ್ಲಿಮರ ಸೊತ್ತುಗಳ ಲೂಟಿ ಪ್ರಾರಂಭಿಸಿದರು. ಆಗ ಇದನ್ನು ನಿಯಂತ್ರಿಸುವ ಹೊಣೆಗಾರಿಕೆಯನ್ನು ಸಂಜೀವ್ ಭಟ್ ಅವರಿಗೆ ವಹಿಸಲಾಯಿತು.

ಈ ಸಂದರ್ಭದಲ್ಲಿ ಅಕ್ಟೊಬರ್ 30, 1990ರಂದು ಬನ್ವಾಡ್ ಪೊಲೀಸ್ ಸ್ಟೇಷನ್ ನಿಂದ ಗಲಭೆ ಹಾಗು ಲೂಟಿಯಲ್ಲಿ ಭಾಗಿಯಾಗಿದ್ದ 133 ಮಂದಿಯನ್ನು ಬಂಧಿಸಲಾಗಿದೆ ಎಂದು ಸಂಜೀವ್ ಭಟ್ ಅವರಿಗೆ ಮಾಹಿತಿ ಬಂತು. ಆ 133 ಮಂದಿಯಲ್ಲಿ ಪ್ರಭುದಾಸ್ ಮಾಧವ್ ವೈಷ್ಣಣಿ ಕೂಡ ಒಬ್ಬರು. ಇವರನ್ನು ಬಂಧಿಸಿದ ಹಲವು ಗಂಟೆಗಳ ಬಳಿಕ ಅಲ್ಲಿಗೆ ಸಂಜೀವ್ ಭಟ್ ತಲುಪಿದರು. ಪ್ರಭುದಾಸ್ ಸಹಿತ 133 ಮಂದಿಯನ್ನು ಸಂಜೀವ್ ಭಟ್ ಅಥವಾ ಅವರ ತಂಡ ಬಂಧಿಸಿರಲಿಲ್ಲ. ಆತ ಸಂಜೀವ್ ಭಟ್ ಅವರ ಕಸ್ಟಡಿಯಲ್ಲೂ ಇರಲಿಲ್ಲ. ಪ್ರಭುದಾಸ್  ಸಹಿತ 133 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗಲೂ ಅವರು ನ್ಯಾಯಾಧೀಶರ ಬಳಿ ಯಾವುದೇ ದೂರು ಹೇಳಿಲ್ಲ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕವೂ ಸಂಜೀವ್ ಭಟ್ ಅಥವಾ ಯಾವುದೇ ಪೊಲೀಸರ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಬಿಡುಗಡೆಯಾದ ಬಳಿಕ ನವೆಂಬರ್ 12, 1990ರಂದು ಅನಾರೋಗ್ಯಕ್ಕೊಳಗಾಗಿ ಪ್ರಭುದಾಸ್ ಆಸ್ಪತ್ರೆ ಸೇರುತ್ತಾರೆ. ಆ ಸಂದರ್ಭದಲ್ಲೂ ಸಂಜೀವ್ ಭಟ್ ವಿರುದ್ಧ ಯಾವುದೇ ದೂರು ನೀಡುವುದಿಲ್ಲ. ಆಸ್ಪತ್ರೆಯಲ್ಲೇ ಪ್ರಭುದಾಸ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯುತ್ತಾರೆ. ಆಗ ನಡೆದ ಪೋಸ್ಟ್ ಮಾರ್ಟಮ್ ವರದಿಯಲ್ಲೂ ಪ್ರಭುದಾಸ್ ಅವರ ದೇಹದ ಒಳಗೆ, ಹೊರಗೆ  ಯಾವುದೇ ರೀತಿಯ ಗಾಯಗಳಾಗಲಿ  ಕಿರುಕುಳ ನೀಡಿದ  ಕುರುಹುಗಳಾಗಲಿ ಇಲ್ಲ ಎಂದು ಹೇಳಲಾಗಿದೆ. ಆ ಬಳಿಕ ಪ್ರಭುದಾಸ್ ಅವರ ಸೋದರ ಸಂಜೀವ್ ಭಟ್ ವಿರುದ್ಧ ದೂರು ದಾಖಲಿಸಿದ್ದಾರೆ.

ಆದರೆ ಸಂಜೀವ್ ಭಟ್ ಈ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟವಾಗಿ ಗೊತ್ತಿದ್ದ ರಾಜ್ಯ ಸರಕಾರ ಅವರಿಗೆ ಪೂರ್ಣ ಬೆಂಬಲ ನೀಡಿತು. ಸಿಐಡಿ ನಡೆಸಿದ ತನಿಖೆಯಲ್ಲೂ ಸಂಜೀವ್ ಭಟ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಸಂಜೀವ್ ಭಟ್ ಅವರ ವಿರುದ್ಧದ ದೂರಿನ ವಿಚಾರಣೆಗೂ ಗುಜರಾತ್ ಸರಕಾರ ಅನುಮತಿ ನಿರಾಕರಿಸಿತು. ಆದರೆ ಇದೆಲ್ಲ 2011ರವರೆಗೆ ಮಾತ್ರ. 2011ರಲ್ಲಿ ಒಂದೇ ದಿನದಲ್ಲಿ ಎಲ್ಲ ಬದಲಾಯಿತು.

2002ರ ಗುಜರಾತ್ ಹತ್ಯಾಕಾಂಡದ ವಿಚಾರಣೆ ನಡೆಸುತ್ತಿದ್ದ ನ್ಯಾ. ನಾನಾವತಿ ಹಾಗು ನ್ಯಾ. ಮೆಹ್ತಾ ಆಯೋಗ ಸಂಜೀವ್ ಭಟ್ ಅವರನ್ನು ಸಾಕ್ಷಿಯಾಗಿ ಕರೆಯಿತು. ಅಲ್ಲಿ ಸಂಜೀವ್ ಭಟ್ ಹತ್ಯಾಕಾಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಅವರ ಸಂಪುಟದ ಸಚಿವರು ಹಾಗು ಹಿರಿಯ ಅಧಿಕಾರಿಗಳ ಪಾತ್ರದ ಕುರಿತು ಸಾಕ್ಷ್ಯ ಹೇಳಿದರು. ಅದೇ ದಿನ ಸಂಜೆ ಗುಜರಾತ್ ಸರಕಾರ ಸಂಜೀವ್ ಭಟ್ ಪರ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಿತು ಮತ್ತು ಮರುದಿನವೇ ಸಂಜೀವ್ ಭಟ್ ಹಾಗು 1990ರಲ್ಲಿ ಅವರ ತಂಡದಲ್ಲಿದ್ದ ಇತರ ಅಧಿಕಾರಿಗಳ ವಿರುದ್ಧ ಪ್ರಭುದಾಸ್ ಪ್ರಕರಣದಲ್ಲಿ ವಿಚಾರಣೆ ಪ್ರಾರಂಭಿಸಲು ಸೂಚನೆ ನೀಡಿತು!. 21 ವರ್ಷ ತಾನೇ ನಿರಪರಾಧಿಗಳು ಎಂದು ಕಾನೂನು ನೆರವು ನೀಡುತ್ತಿದ್ದ ಸರಕಾರ ಹಠಾತ್ತನೆ ಸಂಜೀವ್ ಭಟ್ ವಿಚಾರಣೆ ಎದುರಿಸಬೇಕಾದ ಆರೋಪಿ ಎಂದು ಘೋಷಿಸಿಬಿಟ್ಟಿತು!

ಈ ಬಗ್ಗೆ ಶ್ವೇತಾ ಭಟ್ ಅವರ ಫೇಸ್ ಬುಕ್ ಪೋಸ್ಟ್ ಈ ಕೆಳಗಿದೆ…

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News