ದೇವೇಗೌಡರ ‘ಮಧ್ಯಂತರ ಚುನಾವಣೆ’ ಹೇಳಿಕೆಗೆ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದೇನು ?

Update: 2019-06-21 12:28 GMT

ಹೊಸದಿಲ್ಲಿ, ಜೂ. 21: ‘ಮಧ್ಯಂತರ ಚುನಾವಣೆ’ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಷ್ಟ್ರೀಯಾಧ್ಯಕ್ಷ ದೇವೇಗೌಡ ಅವರು ಯಾವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆಯೋ ಗೊತ್ತಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ಬಗ್ಗೆ ನನಗೆ ಗೊತ್ತಿಲ್ಲ. ದೇವೇಗೌಡರ ಹೇಳಿಕೆ ಬಗ್ಗೆ ಅವರಿಂದಲೇ ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಆದರೆ, ರಾಷ್ಟ್ರೀಯಾಧ್ಯಕ್ಷರ ನಿರ್ದೇಶನದಂತೆ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಕಾರಣವಲ್ಲ. ಮಂಡ್ಯ ಕ್ಷೇತ್ರದಲ್ಲಿ ಏನೆಲ್ಲ ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ಬೆಳಗಾವಿ, ಚಿಕ್ಕೋಡಿ, ಕೊಪ್ಪಳ, ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ನಾವು ಜವಾಬ್ದಾರಿಯೇ ಎಂದು ರೇವಣ್ಣ ಇದೇ ವೇಳೆ ಪ್ರಶ್ನಿಸಿದರು.

ಎಲ್ಲ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಮೇಲ್ಕಂಡ ಜಿಲ್ಲೆಗಳಲ್ಲಿ ಒಕ್ಕಲಿಗರೇ ಇದ್ದರೇ ಎಂದು ಕೇಳಿದ ರೇವಣ್ಣ, ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ಬಾಣ ಬಿಟ್ಟರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಹುಮತ ಇಲ್ಲದೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ಟೀಕಿಸಿದ ಅವರು, ಇದೀಗ ಅವರು ಮೈತ್ರಿ ಸರಕಾರ ಅಸ್ಥಿರಕ್ಕೆ ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ, ಅದು ಯಶಸ್ವಿಯಾಗದು ಎಂದು ಇದೇ ವೇಳೆ ಟೀಕಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯದಲ್ಲಿ ಎಲ್ಲವನ್ನು ನೋಡಿದ್ದಾರೆ. ಹಿಂದೆ ಅವರು ಲೋಕಸಭೆಯಲ್ಲಿ ಸೋತಿದ್ದರು. ಅದಾದ ಮೇಲೆ ಗೆದ್ದು ಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ಏನೂ ಆಗುವುದಿಲ್ಲ ಎಂದು ಅವರು, ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಮಾಡುವ ವಿಚಾರ ಚರ್ಚೆಗೆ ಬಂದಿಲ್ಲ ಎಂದರು.

‘ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಸಂಶಯವೇ ಇಲ್ಲ. ಈ ಬಗ್ಗೆ ಗೌಡರು ಸತ್ಯವನ್ನೆ ಹೇಳಿದ್ದಾರೆ. ಮೈತ್ರಿ ಸರಕಾರ ಬಿದ್ದರೆ ಅದಕ್ಕೆ ಬಿಜೆಪಿ ಕಾರಣವಲ್ಲ. ಆಂತರಿಕ ಕಚ್ಚಾಟದಿಂದಲೇ ಅಧಿಕಾರ ಕಳೆದುಕೊಳ್ಳಲಿದೆ. ಮಧ್ಯಂತರ ಚುನಾವಣೆಯನ್ನು ಜನರು ಒಪ್ಪಿಕೊಳ್ಳುವುದಿಲ್ಲ. ದೊಡ್ಡಪಕ್ಷವಾದ ಬಿಜೆಪಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ’

-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News