ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ಒಳಗೊಳಗೇ ಪ್ರಯತ್ನಿಸುತ್ತಿದೆ: ಸಚಿವ ಕೃಷ್ಣ ಭೈರೇಗೌಡ

Update: 2019-06-21 13:25 GMT

ದಾವಣಗೆರೆ, ಜೂ.21: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ಒಳಗೊಳಗೇ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು. 

ತಾಲೂಕಿನ ವಿವಿಧ ಗ್ರಾಮಗಳಿಗೆ ಕ್ಷೇತ್ರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೊಂದು ವರ್ಷದಿಂದಲೂ ಸಮ್ಮಿಶ್ರ ಸರ್ಕಾರ ಕೆಡವಲು ಬಹಿರಂಗ ಪ್ರಯತ್ನ ನಡೆಸುತ್ತಿದ್ದ ಬಿಜೆಪಿ ನಾಯಕರು ಈಗ ಸರ್ಕಾರ ಕೆಡವುದಿಲ್ಲವೆಂಬ ಹೇಳಿಕೆ ನೀಡಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ನಾಯಕರ ಮಾತು ಕೇಳಿಕೊಂಡು ನಾವೇನೂ ಸುಮ್ಮನೆ ಕುಳಿತಿಲ್ಲ ಎಂದ ಅವರು, ಸಮ್ಮಿಶ್ರ ಸರ್ಕಾರ ಹೇಗಾದರೂ ಮಾಡಿ ಕೆಡವಬೇಕು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ತರಬೇಕೆಂಬ ಉದ್ದೇಶದಿಂದ ವಾಮಮಾರ್ಗದಲ್ಲಿ ಬಿಜೆಪಿಯವರು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇಲ್ಲಿವರೆಗೂ ನಾವು ಸರ್ಕಾರ ಉಳಿಸಿದ್ದೇವೆ ಎಂದರು.

ಎಲ್ಲಾ ಸವಾಲು ಎದುರಿಸುತ್ತಲೇ, ಜನಪರ ಕೆಲಸದ ಪ್ರಯತ್ನ ಮಾಡುತ್ತಿದ್ದೇವೆ. ಜನರು ನಮ್ಮೊಂದಿಗೆ ನಿಂತರೆ ಎಲ್ಲಾ ಸವಾಲು ಎದುರಿಸಿ, ರಾಜ್ಯಕ್ಕೆ, ರಾಜ್ಯದ ಜನತೆಗೆ ಒಳ್ಳೆಯ ಕೆಲಸ ಖಂಡಿತಾ ಮಾಡುತ್ತೇವೆ. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಒಗ್ಗಟ್ಟಿನಿಂದಲೇ ಇದ್ದು, ಸಮ್ಮಿಶ್ರ ಸರ್ಕಾರ ಉಳಿಯಬೇಕು. ಜನಪರ ಕೆಲಸ ಮಾಡುವ ಸಲುವಾಗಿ ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ, ಡಾ.ಪರಮೇಶ್ವರ್ ಹೀಗೆ ಎಲ್ಲಾ ನಾಯಕರ ಸಹಮತದಲ್ಲೇ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದರು. 

ಸರ್ಕಾರ ಉಳಿಸುವುದಷ್ಟೇ ಅಲ್ಲ, ಜನಪರ ಕೆಲಸ ಮಾಡುವುದಕ್ಕೂ ಒತ್ತು ನೀಡಿದ್ದೇವೆ. ಈ ಬಗ್ಗೆ ನಾವು ಗಮನ ಕೇಂದ್ರೀಕರಿಸಿದ್ದೇವೆ. ಇದೇ ಕಾರಣಕ್ಕೆ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ, ಕ್ಷೇತ್ರ ವೀಕ್ಷಣೆ ಮಾಡುತ್ತಿದ್ದೇವೆ. ಕೇವಲ ವರದಿ ಆದರಿಸಿ, ಕೆಲಸ ಮಾಡುವುದಲ್ಲ. ವಾಸ್ತವಾಂಶವನ್ನೂ ನೋಡಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇದರಿಂದ ತಳಮಟ್ಟದ ಜನರಿಗೆ ಸೌಲಭ್ಯ ತಲುಪಬೇಕು ಎಂಬ ಸದುದ್ದೇಶ ಕುಮಾರಸ್ವಾಮಿಯವರದ್ದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News