5 ಲ.ರೂ.ವರೆಗೆ ಆದಾಯವಿದ್ದರೆ ತೆರಿಗೆ ರಿಟರ್ನ್ ಸಲ್ಲಿಸಬೇಕೇ?: ಇಲ್ಲಿದೆ ಉತ್ತರ

Update: 2019-06-21 15:29 GMT

ನೀವು ವಾರ್ಷಿಕ ಐದು ಲಕ್ಷ ರೂ.ವರೆಗೆ ತೆರಿಗೆಗರ್ಹ ಆದಾಯ ಹೊಂದಿದ್ದೀರಿ ಎಂದರೆ ನೀವು ಆದಾಯ ತೆರಿಗೆ ಇಲಾಖೆಗೆ ಗುಡ್ ಬೈ ಹೇಳಬಹುದು ಎಂದು ಭಾವಿಸಿದ್ದರೆ ಮತ್ತೊಮ್ಮೆ ಯೋಚಿಸಿ. ನೀವು ಮುಂಗಡಪತ್ರದಲ್ಲಿ ಪ್ರಕಟಿಸಲಾಗಿರುವ ಶೂನ್ಯ ತೆರಿಗೆ ಲಾಭವನ್ನು ಪಡೆದುಕೊಳ್ಳಬಹುದು,ಆದರೂ ನೀವು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದು ಅಗತ್ಯವಾಗುತ್ತದೆ. ಈಗಲೂ ಆದಾಯ ತೆರಿಗೆ ವಿನಾಯಿತಿ ಮಿತಿಯು 60 ವರ್ಷಕ್ಕಿಂತ ಕೆಳಗಿನವರಿಗೆ 2.5 ಲ.ರೂ. ಮತ್ತು ಹಿರಿಯ ನಾಗರಿಕರಿಗೆ 3 ಲ.ರೂ.ಗಳೇ ಆಗಿವೆ ಎನ್ನುವುದನ್ನು ಮರೆಯಬೇಡಿ.

 ಆದ್ದರಿಂದ ನಿಮ್ಮ ವಾರ್ಷಿಕ ಆದಾಯ ಈ ಮಿತಿಗಿಂತ ಹೆಚ್ಚಿದ್ದರೆ ನೀವು ಕಡ್ಡಾಯವಾಗಿ ಐಟಿಆರ್ ಸಲ್ಲಿಸಲೇಬೇಕು. ನೀವು ಐಟಿಆರ್ ಸಲ್ಲಿಸಿದಾಗ ನಿಮ್ಮ ಆದಾಯ ಅದರಲ್ಲಿ ಐದು ಲ.ರೂ.ವರೆಗಿದ್ದರೆ ಐಟಿ ಕಾಯ್ದೆಯ ಕಲಂ 87 ಎ ಅಡಿ ಪಾವತಿಸಬೇಕಿರುವ ಎಲ್ಲ ತೆರಿಗೆಗಳಿಂದ ವಿನಾಯಿತಿಯನ್ನು ಪಡೆಯಬಹುದು. ನೀವು ಐದು ಲ.ರೂ.ವರೆಗೆ ಆದಾಯವನ್ನು ಹೊಂದಿದ್ದೀರಿ ಮತ್ತು ನೀವು ಪಾವತಿಸಬೇಕಿರುವುದು ಶೂನ್ಯ ತೆರಿಗೆ ಎಂದು ಭಾವಿಸಿ ಐಟಿಆರ್‌ನ್ನು ಸಲ್ಲಿಸದಿದ್ದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಸ್ವೀಕರಿಸಲು ಸಜ್ಜಾಗಿರಬೇಕಾಗುತ್ತದೆ.

 ನಿಮ್ಮ ವಾರ್ಷಿಕ ಆದಾಯವು 2.5 ಲ.ರೂ.ಅಥವಾ 3 ಲ.ರೂ(ಹಿರಿಯ ನಾಗರಿಕರಿಗೆ)ಗಳನ್ನು ದಾಟಿದ್ದರೆ ಐಟಿಆರ್ ಸಲ್ಲಿಸಬೇಕು. ಇದರರ್ಥ 2019-20ನೇ ಹಣಕಾಸು ವರ್ಷದಲ್ಲಿ ನಿಮ್ಮ ಆದಾಯದ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಲು ನೀವು ಐಟಿಆರ್ ಸಲ್ಲಿಸುವಾಗ ಮೊದಲು ನಿಮ್ಮ ಒಟ್ಟು ಆದಾಯವನ್ನು ಘೋಷಿಸುವುದು ಅಗತ್ಯವಾಗುತ್ತದೆ. ನಿಮ್ಮ ಒಟ್ಟು ಆದಾಯ ವೇತನ,ಉಳಿತಾಯ ಖಾತೆ ಮತ್ತು ನಿರಖು ಠೆವಣಿಗಳ ಮೇಲಿನ ಬಡ್ಡಿ ಇತ್ಯಾದಿಗಳಂತಹ ವಿವಿಧ ಮೂಲಗಳಿಂದ ಆದಾಯಗಳನ್ನು ಒಳಗೊಂಡಿರುತ್ತದೆ. ನಂತರ ನೀವು ಪಡೆಯಲು ಅರ್ಹರಾಗಿರುವ ಮನೆ ಬಾಡಿಗೆ ಭತ್ಯೆ,ಸ್ಟಾಂಡರ್ಡ್ ಡಿಡಕ್ಷನ್,ಸೆಕ್ಷನ್ 80ಸಿ,80ಡಿ ಅಡಿ ಕಡಿತಗಳು,ಗೃಹಸಾಲದ ಮೇಲೆ ಪಾವತಿಸಿರುವ ಬಡ್ಡಿ ಇತ್ಯಾದಿಗಳಂತಹ ಎಲ್ಲ ಕಡಿತಗಳು ಮತ್ತು ತೆರಿಗೆ ವಿನಾಯಿತಿಗಳನ್ನು ದೊರಕಿಸಿಕೊಳ್ಳಬಹುದು. ಹಾಲಿ ಆದಾಯ ತೆರಿಗೆ ಕಾನೂನಿನಂತೆ ಈ ಎಲ್ಲ ಕಡಿತಗಳ ಬಳಿಕ ನಿಮ್ಮ ನಿವ್ವಳ ತೆರಿಗೆಗರ್ಹ ಆದಾಯವು ಐದು ಲಕ್ಷ ರೂ.ಗಳನ್ನು ಮೀರದಿದ್ದರೆ ಮಾತ್ರ ಸೆಕ್ಷನ್ 87 ಎ ಅಡಿ ರಿಯಾಯಿತಿಗೆ ನೀವು ಅರ್ಹರಾಗುತ್ತೀರಿ.

 ವ್ಯಕ್ತಿಯ ವಾರ್ಷಿಕ ಆದಾಯವು ಐದು ಲ.ರೂ.ವರೆಗಿದ್ದರೆ ತೆರಿಗೆಯನ್ನು ವಿಧಿಸುವುದಿಲ್ಲ ಎಂಬ ಮಧ್ಯಂತರ ಮುಂಗಡಪತ್ರದಲ್ಲಿಯ ಪ್ರಮುಖ ಪ್ರಕಟಣೆಯು ಷರತ್ತಿನಿಂದ ಕೂಡಿದೆ. ತೆರಿಗೆ ಹಂತಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಸೆಕ್ಷನ್ 87 ಎ ಅಡಿಯ ಸೌಲಭ್ಯದ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಈ ಲಾಭವನ್ನು ಕೊಡಮಾಡಲಾಗಿದೆ. ಐದು ಲ.ರೂ.ವರೆಗೆ ಆದಾಯವಿರುವ ವ್ಯಕ್ತಿ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲವಾದರೂ ಆತನ ಆದಾಯ ಗರಿಷ್ಠ ವಿನಾಯಿತಿ ಮಿತಿಯನ್ನು ದಾಟಿದರೆ ಐಟಿಆರ್ ಸಲ್ಲಿಸಬೇಕಾಗುತ್ತದೆ. ಐಟಿಆರ್‌ನ್ನು ವಿಳಂಬವಾಗಿ ಸಲ್ಲಿಸಿದರೆ ಕಲಂ 234ಎಫ್ ಅಡಿ 1,000 ರೂ.ದಂಡ ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News