ತ್ರಿವಳಿ ತಲಾಕ್ ಮಸೂದೆ ಸಂವಿಧಾನ ವಿರೋಧಿ ಎಂದು ಹೇಳಲು ಶಶಿ ತರೂರ್ ನೀಡಿದ ಮೂರು ಕಾರಣಗಳೇನು ?

Update: 2019-06-22 06:44 GMT

 ಹೊಸದಿಲ್ಲಿ, ಜೂ.21: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕವನ್ನು ಮಂಡಿಸಿದಾಗ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಪ್ರಬಲವಾಗಿ ವಿರೋಧಿಸಿದವು.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರಕಾರವು ಜಾರಿಗೊಳಿಸಲು ಹೊರಟಿರುವ ತ್ರಿವಳಿ ತಲಾಖ್ ವಿಧೇಯಕವು ಸಂವಿಧಾನ ವಿರೋಧಿಯಾಗಿದೆಯೆಂದು ಟೀಕಿಸಿದರು.

 ವಿವಾಹದ ಕುರಿತ ಮುಸ್ಲಿಂ ಮಹಿಳೆಯರ ಹಕ್ಕುಗಳ ವಿಧೇಯಕ 2019’ನ್ನು ಸದನದಲ್ಲಿ ಮಂಡಿಸುವುದನ್ನು ನಾನು ವಿರೋಧಿಸುತ್ತೇನೆ. ತ್ರಿವಳಿ ತಲಾಖ್‌ನ್ನು ನಾನು ಸಮರ್ಥಿಸುವುದಿಲ್ಲ. ಆದರೆ ಈ ವಿಧೇಯಕದ ಪಠ್ಯ ಹಾಗೂ ಕರಡನ್ನು ಮತ್ತು ಅದರ ಜಾರಿಗೊಳಿಸಲು ಹೊರಟಿರುವ ರೀತಿಯನ್ನು ವಿರೋಧಿಸುತ್ತೇನೆ. ಈ ವಿಧೇಯಕವು ತ್ರಿವಳಿ ತಲಾಖ್‌ನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮೂಲಕ ನಾಗರಿಕ ಕಾನೂನು ಹಾಗೂ ಕ್ರಿಮಿನಲ್ ಕಾನೂನಿನ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಸಾಯಿರಾ ಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಮ್ಮ ದೇಶದಲ್ಲಿ ತ್ರಿವಳಿ ತಲಾಖ್ ಅಸಿಂಧು ಎಂದು ಪರಿಗಣಿಸಲ್ಪಟ್ಟಿದೆ ಎಂದವರು ಹೇಳಿದರು. ತ್ರಿವಳಿ ತಲಾಖ್ ವಿಧೇಯಕವನ್ನು ತನ್ನ ಪಕ್ಷದ ವಿರೋಧಕ್ಕೆ ಮೂರು ಕಾರಣಗಳನ್ನು ತರೂರ್ ಸದನಕ್ಕೆ ತಿಳಿಸಿದರು. ಮೊದಲನೆಯದಾಗಿ ಪತ್ನಿಯನ್ನು ಹಾಗೂ ಅವಲಂಬಿತರನ್ನು ತೊರೆಯುವ ಪ್ರವೃತ್ತಿ ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಸೀಮಿತವಲ್ಲ.

ಹೀಗಿರುವಾಗ ಕುಟುಂಬಿಕರನ್ನು ಹಾಗೂ ಅವಲಂಬಿತರನ್ನು ತೊರೆಯುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಸಾರ್ವತ್ರಿಕ ಕಾನೂನನ್ನು ಎಲ್ಲರಿಗೂ ಅನ್ವಯವಾಗುವಂತೆ ಯಾಕೆ ರೂಪಿಸಬಾರದು ಎಂದು ತರೂರ್ ಪ್ರಶ್ನಿಸಿದರು. ಆದರೆ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಿರಿಸಿ ಈ ವಿಧೇಯಕವನ್ನು ರೂಪಿಸಲಾಗಿದೆ. ಹೀಗಾಗಿ ಇದು ಸಂವಿಧಾನದ 15 ಹಾಗೂ 16ನೇ ಕಲಮಿನ ಉಲ್ಲಂಘನೆಯಾಗಿದೆ ಎಂದರು.

ಈ ವಿಧೇಯಕವನ್ನು ಜಾರಿಗೊಳಿಸಿದಲ್ಲಿ ಮುಸ್ಲಿಂ ಪುರುಷರಿಗೆ ಶಿಕ್ಷೆಯಾಗಬಹುದಾದರೂ, ಮುಸ್ಲಿಂ ಮಹಿಳೆಯರಿಗೆ ಯಾವುದೇ ರೀತಿಯ ಪ್ರಯೋಜನವಾಗಲಾರದೆಂದು ತರೂರ್ ಪ್ರತಿಪಾದಿಸಿದರು.

ತ್ರಿವಳಿ ತಲಾಖ್ ವಿಧೇಯಕ ದುರ್ಬಳಕೆಯಾಗುವ ಸಾಧ್ಯತೆಯೂ ಇದೆ ಎಂದವರು ಎಚ್ಚರಿಕೆ ನೀಡಿದರು. ಈ ವಿಧೇಯಕದಡಿ ತ್ರಿವಳಿ ತಲಾಖ್ ನೀಡಿದ ಮುಸ್ಲಿಂ ಪುರುಷರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಗುವ ಬಗ್ಗೆ ಪ್ರಸ್ತಾವನೆಯಿದೆ. ಆದರೆ ಈ ಮೂರು ವರ್ಷಗಳ ಅವಧಿಯಲ್ಲಿ ಮಹಿಳೆಯ ಹಾಗೂ ಮಕ್ಕಳ ಪಾಲನೆಯನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ತರೂರ್ ಪ್ರಶ್ನಿಸಿದರು.

ಮೂರನೆಯದಾಗಿ ಇದೊಂದು ತಪ್ಪಾಗಿ ಗ್ರಹಿಸಲಾದ ವಿಧೇಯಕವಾಗಿದ್ದು ಅದನ್ನು ಶಾಸನವಾಗಿ ಜಾರಿಗೊಳಿಸಲು ಇರುವ ಶಾಸನಾತ್ಮಕ ಸಾಮರ್ಥ್ಯವನ್ನು ಈ ಸಂಸತ್ ಹೊಂದಿಲ್ಲವೆಂದು ತರೂರ್ ಅಭಿಪ್ರಾಯಿಸಿದರು.

READ THIS STORY IN ENGLISH

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News