339 ಕೋ.ರೂ. ಕಿಕ್ ಬ್ಯಾಕ್ ಪಡೆದ ಆರೋಪ: ವಾಯುಪಡೆ, ರಕ್ಷಣಾ ಸಚಿವಾಲಯದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

Update: 2019-06-22 17:24 GMT

ಹೊಸದಿಲ್ಲಿ,ಜೂ.21: ಭಾರತೀಯ ವಾಯುಪಡೆಗೆ 2009ರಲ್ಲಿ 2895 ಕೋಟಿ ರೂ. ಮೌಲ್ಯದ 75 ಪಿಲಾಟಸ್ ಬೇಸಿಕ್ ಟ್ರೈನರ್ ವಿಮಾನಗಳ ಖರೀದಿಯಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ವಿವಾದಾತ್ಮಕ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಮತ್ತಿತರರ ವಿರುದ್ಧ ಸಿಬಿಐ ಶನಿವಾರ ಪ್ರಕರಣ ದಾಖಲಿಸಿಕೊಂಡಿದೆ.

 ಭಂಡಾರಿಯ ನಿವಾಸ ಹಾಗೂ ಕಚೇರಿ ಮತ್ತು ಫಿಲಾಟಸ್ ಕಾರ್ಯಾಲಯ ಸೇರಿದಂತೆ ದಿಲ್ಲಿಯ 9 ಕಡೆಗಳಲ್ಲಿ ಸಿಬಿಐ ಇಂದು ದಾಳಿ ನಡೆಸಿದೆ. ಫಿಲಾಟಸ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ಮೂರು ವರ್ಷಗಳ ಕಾಲ ತನಿಖೆ ನಡೆಸಿದ ಬಳಿಕ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಸಿಬಿಐ ತಿಳಿಸಿದೆ.

ಈ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಭಾರತೀಯ ವಾಯುಪಡೆ, ರಕ್ಷಣಾ ಸಚಿವಾಲಯ ಹಾಗೂ ಸ್ವಿಟ್ಜರ್‌ಲ್ಯಾಂಡ್ ಮೂಲದ ಪಿಲಾಟಸ್ ಏರ್‌ಕ್ರಾಫ್ಟ್ ಲಿಮಿಟೆಡ್‌ನ ಗುರುತಿಸಲ್ಪಡದ ಅಧಿಕಾರಿಗಳ ವಿರುದ್ಧವೂ ಕೇಂದ್ರೀಯ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿದೆ.

 2009ರಲ್ಲಿ ವಾಯುಪಡೆಗೆ ಬೇಸಿಕ್ ಟ್ರೈನರ್ ವಿಮಾನಗಳ ಖರೀದಿಗಾಗಿ ಬಿಡ್ಡಿಂಗ್ ಕರೆಯಲಾಗಿತ್ತು. ಸ್ವಿಸ್ ಮೂಲದ ಪಿಲಾಟಸ್ ಕಂಪೆನಿಯು ವಿಮಾನಗಳ ಪೂರೈಕೆಯ ಬಿಡ್ಡಿಂಗ್ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಪಿಲಾಟಸ್ ಸಂಸ್ಥೆಯು ಆಫ್‌ಸೆಟ್ ಇಂಡಿಯಾ ಸೊಲ್ಯೂಶನ್ಸ್ ಪ್ರೈ. ಲಿಮಿಟೆಡ್ ಕಂಪೆನಿಯ ನಿರ್ದೇಶಕರಾದ ಸಂಜಯ್ ಭಂಡಾರಿ ಹಾಗೂ ಬಿಮಲ್‌ಸರೀನ್ ಅವರೊಂದಿಗೆ ಕ್ರಿಮಿನಲ್ ಸಂಚು ಹೂಡಿತ್ತು. ಅದು ಅಪ್ರಾಮಾಣಿಕವಾಗಿ ಹಾಗೂ ವಂಚನೆಯಿಂದ 2010ರ ಜೂನ್‌ನಲ್ಲಿ ಭಂಡಾರಿಯವರ ಜೊತೆಗೆ ಸೇವಾಪೂರೈಕೆದಾರ ಒಪ್ಪಂದಕ್ಕೆ ಸಹಿಹಾಕಿತ್ತು. ಇದು 2008ರ ರಕ್ಷಣಾ ಖರೀದಿ ನಿಯಮಾವಳಿಗಳ ಉಲ್ಲಂಘನೆಯಾಗಿದೆಯೆಂದು ಸಿಬಿಐ ಆಪಾದಿಸಿದೆ.

 ಪಿಲಾಟಸ್ ಸಂಸ್ಥೆಯು ಹೊಸದಿಲ್ಲಿಯ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಲ್ಲಿರುವ ಆಫ್‌ಸೆಟ್ ಇಂಡಿಯಾ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್‌ನ ಖಾತೆಗೆ 10 ಲಕ್ಷ ಸ್ವಿಸ್ ಫ್ರಾಂಕ್ ಕರೆನ್ಸಿ ( ಸುಮಾರು 7.13 ಕೋಟಿ ರೂ.) ಹಣವನ್ನು ಪಾವತಿಸಿತ್ತು.

ಇದರ ಜೊತೆಗೆ ಭಂಡಾರಿಗೆ ಸೇರಿದ ದುಬೈನಲ್ಲಿನ ಆಫ್‌ಸೆಟ್ ಇಂಡಿಯಾ ಸೊಲ್ಯೂಶನ್ಸ್‌ನ ಬ್ಯಾಂಕ್ ಖಾತೆಗಳಿಗೆ ಹೆಚ್ಚುವರಿಯಾಗಿ 350 ಕೋಟಿ ರೂ. ವೌಲ್ಯದ ಸ್ವಿಸ್ ಫ್ರಾಂಕ್ ಹಣವನ್ನು 2011ರಿಂದ 2015ರ ನಡುವಿನ ಅವಧಿಯಲ್ಲಿ ವರ್ಗಾಯಿಸಿತ್ತು.

ಪಿಲಾಟಸ್ ಸಂಸ್ಥೆಯು 2010ರ ನವೆಂಬರ್ 12ರಂದು ರಕ್ಷಣಾ ಸಚಿವಾಲಯದ ಜೊತೆ ಒಪ್ಪಂದಕ್ಕೆ ಸಹಿಹಾಕುವಾಗ ಉದ್ದೇಶಪೂರ್ವಕವಾಗಿ ಭಂಡಾರಿ ಡೊತೆಗೆ ತಾನು ಮಾಡಿಕೊಂಡಿರುವ ಸೇವಾ ಪೂರೈಕೆದಾರ ಒಪ್ಪಂದದ ಕುರಿತ ವಾಸ್ತವಾಂಶಗಳನ್ನು ಬಚ್ಚಿಟ್ಟಿದೆಯೆಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News