ನಿರಾಶರಾಗಬೇಡಿ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯನ್ನು ಕರೆತರುವೆ: ಸಚಿವ ಪ್ರಿಯಾಂಕ್ ಖರ್ಗೆ

Update: 2019-06-22 14:32 GMT

ಕಲಬುರ್ಗಿ, ಜೂ. 22: ಭಾರೀ ಮಳೆ ಬಿದ್ದ ಪರಿಣಾಮ ಸಾರ್ವಜನಿಕರ ಹಿತದೃಷ್ಟಿ ಹಾಗೂ ಭದ್ರತೆಯ ಹಿನ್ನೆಲೆಯಲ್ಲಿ ಹೇರೂರು(ಬಿ) ಗ್ರಾಮದಲ್ಲಿ ನಿಗದಿಯಾಗಿದ್ದ ಸಿಎಂ ಗ್ರಾಮ ವಾಸ್ತವ್ಯ ಮುಂದೂಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಸಿಎಂ ಅವರನ್ನು ಗ್ರಾಮಕ್ಕೆ ಕರೆಸಲಾಗುವುದು. ಹೀಗಾಗಿ ನೀವು ಯಾರೂ ನಿರಾಸೆಗೊಳಗಾಗಬಾರದು ಎಂದು ಪ್ರಿಯಾಂಕ್ ಖರ್ಗೆ, ಇದೇ ವೇಳೆ ಗ್ರಾಮಸ್ಥರಿಗೆ ಅಭಯ ನೀಡಿದರು.

ಸಿಎಂ ಅವರ ಜನತಾ ದರ್ಶನ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳ ವೀಕ್ಷಿಸಿದ ನಂತರ ಗ್ರಾಮಸ್ಥರನ್ನು ಕುರಿತು ಇಲ್ಲಿನ ಗ್ರಾಮ ಪಂಚಾಯತ್ ಆವರಣದಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ಕಾರ್ಯಕ್ರಮ ಮುಂದೂಡಿರುವುದು ನಿರಾಸೆ ತಂದಿರಬಹುದು. ಆದರೆ ಮಳೆಯಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ. ಮುಂದೊಂದು ದಿನ ಸಿಎಂ ಅವರನ್ನು ಇಲ್ಲಿಗೆ ಕರೆಸಲಾಗುವುದು. ಗ್ರಾಮದ ಅಭಿವೃದ್ದಿಗಾಗಿ ಸಮಾಜಕಲ್ಯಾಣ ಇಲಾಖೆವತಿಯಿಂದ 1.50ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದ್ದು, ಗ್ರಾಮದಲ್ಲಿ ಹಾಗೂ ಅಫಜಲಪುರ ಕ್ಷೇತ್ರದ ಅಭಿವೃದ್ದಿಗೆ ಪಟ್ಟಿಯನ್ನು ಸಿದ್ದಪಡಿಸಿದ್ದು, ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಸಿಎಂಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಭಿಕರ ಕೈಯಲ್ಲಿ ಅರ್ಜಿಗಳನ್ನು ಗಮನಿಸಿದ ಸಚಿವರು, ಇಂದಿನ ಸಿಎಂ ಗ್ರಾಮ ವಾಸ್ತವ್ಯ ಮುಂದೂಡಲಾಗಿದೆ. ಆದರೂ ಸಾರ್ವಜನಿಕರು ತಂದಿರುವ ಸಮಸ್ಯೆಗಳ ಕುರಿತ ಅರ್ಜಿಗಳನ್ನು ಸ್ವೀಕರಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ, ತಹಶೀಲ್ದಾರ ಹಾಗೂ ತಾಪಂ ಇಓ ಅವರಿಗೆ ಅವರು ಸೂಚಿಸಿದರು.

ಆರಂಭದಲ್ಲೆ ಮಾತನಾಡಿದ ಶಾಸಕ ಎಂ.ವೈ.ಪಾಟೀಲ್, ಹೇರೂರು ಗ್ರಾಮಕ್ಕೆ ಮೂಲಭೂತ ಸೌಲಭ್ಯ ಒದಗಿಸಲು 50ಲಕ್ಷ ರೂ.ಗಳ ಜೊತೆಗೆ ಸಮುದಾಯ ಭವನ ನಿರ್ಮಾಣಕ್ಕೆ 2ಕೋಟಿ ರೂ.ಅನುದಾನ ಬಿಡುಗಡೆ ಮಾಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೋರಿದರು. ನಂತರ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ತಂಗಬೇಕಿದ್ದ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಸಚಿವರ ಮಾತಿನಿಂದ ಸ್ಪೂರ್ತಿಪಡೆದ ಮಕ್ಕಳು ಸಿಎಂ ಬಾರದಿರುವುದು ದುಃಖದ ವಿಚಾರ. ಆದರೆ ನಮ್ಮ ರೈತರು ಅನುಕೂಲ ಪಡೆದುಕೊಳ್ಳಲಿದ್ದಾರೆ.

ಒಂದನ್ನು ಕಳೆದುಕೊಂಡರೆ ಮತ್ತೊಂದನ್ನು ಪಡೆದುಕೊಂಡಂತಾಗಿದೆ. ನಾವೆಲ್ಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತಯಾರಾಗಿದ್ದೆವು. ಆದರೆ ಕಾರ್ಯಕ್ರಮ ಮುಂದೂಡಿದ್ದು ನಿರಾಸೆ ತಂದಿದೆ ಎಂದು ಶಾಲಾ ಮಕ್ಕಳ ಸಚಿವರಿಗೆ ಅಲವತ್ತುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News