ಅನ್ವರ್ ಹತ್ಯೆ ಆರೋಪಿಗಳ ಬಂಧನಕ್ಕೆ ಪೊಲೀಸರಿಂದ ನಿರ್ಲಕ್ಷ್ಯ ಆರೋಪ: ಕುಟುಂಬಸ್ಥರಿಂದ ಉಪವಾಸ ಸತ್ಯಾಗ್ರಹ

Update: 2019-06-22 11:38 GMT

ಚಿಕ್ಕಮಗಳೂರು, ಜೂ.22: ಕಳೆದ ಒಂದು ವರ್ಷದ ಹಿಂದೆ ನಗರದ ಗೌರಿಕಾಲುವೆ ಬಡಾವಣೆಯಲ್ಲಿ ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಗೊಳಗಾದ ಬಿಜೆಪಿ ಮುಖಂಡ ಅನ್ವರ್ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಒತ್ತಾಯಿಸಿ ಅನ್ವರ್ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಶನಿವಾರ ನಗರದ ಗಾಂಧಿ ಪ್ರತಿಮೆ ಎದುರು ಉಪವಾಸ ಧರಣಿ ನಡೆಸಿದರು.

ಹತ್ಯೆಗೊಳಗಾದ ಅನ್ವರ್ ಸಹೋದರರಾದ ಕಬೀರ್, ಅಬ್ದುಲ್ ಬಶೀರ್, ತಂದೆ ಹಮ್ಮಬ್ಬ, ಮಾವ ಬಶೀರ್, ಸಂಬಂಧಿಗಳು ಹಾಗೂ ಸ್ನೇಹಿತರಾದ ದಾವೂದ್, ಅಕ್ರಮ್, ಮುನೀರ್ ಗೌಸ್, ಆಲಿ, ಮುನೀರ್, ಇಬ್ರಾಹೀಂ, ಇಂಜಿನಿಯರ್ ರಘು, ನಗರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಚ್.ಡಿ.ತಮ್ಮಯ್ಯ ಸೇರಿದಂತೆ 30 ಕ್ಕೂ ಜನರು ಶನಿವಾರ ಬೆಳಗ್ಗೆ ನಗರದ ಜಿಲ್ಲಾ ಗ್ರಂಥಾಲಯದ ಎದುರಿರುವ ಗಾಂಧಿ ಪ್ರತಿಮೆ ಬಳಿ ಸಂಜೆಯವರೆಗೂ ಧರಣಿ ನಡೆಸಿದರು. ಈ ವೇಳೆ ಧರಣಿ ನಿರತರು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸರಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಧರಣಿ ನಿರತರು, 2018ರ ಜೂ.22ರಂದು ರಾತ್ರಿ ಬಗರದ ಗೌರಿ ಕಾಲುವೆ ಬಡಾವಣೆಯಲ್ಲಿ ಅನ್ವರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಚಾಕು ಇರಿದು ಹತ್ಯೆ ಮಾಡಿದ್ದಾರೆ. ಈ ಪ್ರಕರಣ ನಡೆದು ಇಂದಿಗೆ 1 ವರ್ಷವಾಯಿತು. ಆದರೆ ಪೊಲೀಸರು ಮಾತ್ರ ತನಿಖೆ ಪ್ರಗತಿಯಲ್ಲಿದೆ ಎಂದು ಸಮಜಾಯಿಸಿ ನೀಡುತ್ತಿದ್ದಾರೆಯೇ ಹೊರತು ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಕುಟುಂಬಕ್ಕೆ ಆಧಾರವಾಗಿದ್ದ ಅನ್ವರ್ ಅವರನ್ನು ಕಳೆದುಕೊಂಡ ಕುಟುಂಬ ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಪೊಲೀಸರಿಂದ ನ್ಯಾಯ ಮರೀಚಿಕೆ ಎಂಬ ಭಾವನೆ, ಹತಾಶೆ ಮೂಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಲೆ ನಡೆದ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿದ್ದ ಅಣ್ಣಾಮಲೈ ಅವರಿಗೆ ಕೊಲೆಗಾರರ ಸುಳಿವು ಸಿಕ್ಕಿತ್ತು. ಅವರು ತನಿಖೆ ನಡೆಸುತ್ತಿದ್ದಾಗಲೇ ಅವರನ್ನು ರಾಜ್ಯ ಸರಕಾರ ಕರ್ತವ್ಯಕ್ಕೆಂದು ಮಾನಸ ಸರೋವರಕ್ಕೆ ಕಳಿಸಿತು. ಅಲ್ಲಿಂದ ಬಂದ ನಂತರವೂ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಯಿತು. ಅವರ ಬಳಿಕ ಪ್ರಕರಣದ ತನಿಖೆ ನಡೆಸುತ್ತಿದ್ದ ನಾಲ್ವರು ತನಿಖಾಧಿಕಾರಿಗಳನ್ನೂ ಬೇರೆಡೆಗೆ ವರ್ಗಾವಣೆ ಮಾಡಲಾಯಿತು. ಇದರಿಂದಾಗಿ ಕೊಲೆ ಪ್ರಕರಣದ ತನಿಖೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂದ ಅವರು, ಪೊಲೀಸರು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಈ ಹತ್ಯೆ ಪ್ರಕರಣದ ತನಿಖೆಯನ್ನು ನಿರ್ಲಕ್ಷ್ಯಿಸಿದ್ದಾರೆಂದು ಧರಣಿ ನಿರತರು ಇದೇ ವೇಳೆ ಆರೋಪಿಸಿದರು.

ಪ್ರಕರಣ ಶೀಘ್ರ ತನಿಖೆ ಹಾಗೂ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಶನಿವಾರ ಬೆಳಗ್ಗೆಯಿಂದ ಸಂಜೆಯ ವರೆಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಪೊಲೀಸ್ ಇಲಾಖೆ ಸೌಜನ್ಯಕ್ಕಾದರೂ ಧರಣಿ ನಿರತರನ್ನು ಮಾತನಾಡಿಸಲು ಆಗಮಿಸಿಲ್ಲ. ಧರಣಿಗೆ ಪೊಲೀಸರು ಸ್ಪಂದಿಸದಿದ್ದಲ್ಲಿ ಹೋರಾಟವನ್ನು ಬೇರೆ ರೂಪದಲ್ಲಿ ಹಂತ ಹಂತವಾಗಿ ಮಾಡಲಾಗುವುದು. ಇನ್ನು 15 ದಿನಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಪ್ಪಳ್ಳಿ ಬಡಾವಣೆಯಲ್ಲಿ ಬಂದ್ ಆಚರಿಸಲಾಗುವುದು. ಅದಕ್ಕೂ ಸ್ಪಂದಿಸದಿದ್ದಲ್ಲಿ ನಗರಬಂದ್‍ಗೆ ಕರೆ ನೀಡಲಾಗುವುದು, ನಂತರ ಸರಕಾರದ ಅಧಿವೇಶನದ ವೇಳೆ ಸಿಎಂಗೆ ದಿಗ್ಬಂಧನ ಹಾಕಲಾಗುವುದು ಎಂದ ಅವರು ಪೊಲೀಸರು ಇಂತಹ ಘಟನೆಗಳಿಗೆ ಅವಕಾಶ ನೀಡದೇ ಶೀಘ್ರ ಆರೋಪಿಗಳನ್ನು ಬಂಧಿಸಬೇಕೆಂದು ಧರಣಿ ನಿರತರು ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ವಾರ್ತಾಭಾರತಿಯೊಂದಿಗೆ ಮಾತನಾಡಿದ ಅನ್ವರ್ ಸಹೋದರ ಕಬೀರ್, ಪೊಲೀಸರಿಗೆ ಹತ್ಯೆ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಆದರೆ ರಾಜ್ಯ ಸರಕಾರದ ಪ್ರಭಾವಿ ಮುಸ್ಲಿಂ ಸಚಿವರ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂಬ ಅನುಮಾನ ಕಾಡುತ್ತಿದೆ. ಚಿಕ್ಕಮಗಳೂರಿನಂತಹ ಸಣ್ಣ ನಗರದಲ್ಲಿ ನಡೆದ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ನಂಬಲಾಗುತ್ತಿಲ್ಲ. ಗೌರಿ ಲಂಕೇಶ್, ದಾಬೋಲ್ಕರ್ ರಂತಹ ಹೋರಾಟಗಾರರ ಹತ್ಯೆ ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ ಅನ್ವರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದಿರುವುದು ವಿಪರ್ಯಾಸ. ಅನ್ವರ್ ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಿ ಕಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News