ಮುಂಗಾರು ಮಳೆ ಕೊರತೆ: 'ಶಿವಮೊಗ್ಗ ಬರ ಪೀಡಿತ ಜಿಲ್ಲೆ' ಘೋಷಣೆಗೆ ಸಂಸದ ಬಿ.ವೈ.ರಾಘವೇಂದ್ರ ಆಗ್ರಹ

Update: 2019-06-22 11:48 GMT

ಶಿವಮೊಗ್ಗ, ಜೂ. 22: 'ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಶಿವಮೊಗ್ಗ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಬೇಕು' ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಶೇ. 80 ರಷ್ಟು ಮಳೆ ಕೊರತೆಯಗಿದೆ. 1.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೇವಲ ಮೂರುವರೆ ಸಾವಿರ ಎಕರೆಯಲ್ಲಿ ಬಿತ್ತನೆಯಾಗಿದೆ. ಆದರೆ ನೀರಿನ ಕೊರತೆಯಿಂದ ಆ ಬೆಳೆ ಕೂಡ ಒಣಗಲಾರಂಭಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಜನ - ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಲೆದೋರಿದೆ. ಕೆರೆಕಟ್ಟೆಗಳು ಬರಿದಾಗಿವೆ. ಬೋರ್ ವೆಲ್, ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಜಿಲ್ಲೆಯಲ್ಲಿ ಬರಗಾಲ ಸ್ಥಿತಿ ಭೀಕರವಾಗಿದೆ. ರೈತರು, ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಬೆಕು ಎಂದು ಒತ್ತಾಯಿಸಿದ್ದಾರೆ. 

ಮುಂಗಾರು ಮಳೆ ಕೊರತೆಯಿಂದ ರೈತರು ತೊಂದರೆಯಲ್ಲಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡರವರು ಜಿಲ್ಲೆಯಲ್ಲಿ ಕಾಟಾಚಾರದ ಸಭೆ ನಡೆಸಿ ಹೋಗಿದ್ದಾರೆ. ಇದರಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಜನರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ. 

ವಿರೋಧ: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಹರಿಸಲು ಉಪಮುಖ್ಯಮಂತ್ರಿ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಿ 30 ಟಿಎಂಸಿ ನೀರು ಹರಿಸಲು ಡಿಪಿಆರ್ ತಯಾರಿಸಲು ಅನುಮತಿ ನೀಡಲಾಗಿದೆ. ಇದಕ್ಕೆ ಜಿಲ್ಲೆಯ ಸಾಹಿತಿಗಳು, ಬುದ್ದಿಜೀವಿಗಳು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗೆ ನಮ್ಮ ಆಕ್ಷೇಪ ಕೂಡ ಇದೆ ಎಂದರು.

ಲಿಂಗನಮಕ್ಕಿ ಡ್ಯಾಂ ನಿರ್ಮಾಣಕ್ಕೆ ಭೂಮಿ ತ್ಯಾಗ ಮಾಡಿದ ಶರಾವತಿ ಸಂತ್ರಸ್ತರಿಗೆ ಇಲ್ಲಿಯವರೆಗೂ ಭೂಮಿ ಹಂಚಿಕೆಯಾಗಿಲ್ಲ. ಹಾಗೆಯೇ ಈ ಭಾಗದಲ್ಲಿ ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ಮೊದಲು ಸಂತ್ರಸ್ತರಿಗೆ ನ್ಯಾಯ ಕಲ್ಪಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು. 

ಬಳಸಿಕೊಳ್ಳಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಉತ್ತಮ ಯೋಜನೆಯಾಗಿದೆ. ಮೂರು ತಿಂಗಳ ಮೊದಲ ಕಂತು ಈಗಾಗಲೇ ಬಿಡುಗಡೆಯಾಗಿದೆ. 12 ಸಾವಿರ ಕೋಟಿ ಹಣ ಬಿಡುಗಡೆಯಾಗಿದೆ. ಈ ತಿಂಗಳ 30 ರೊಳಗೆ ರೈತರು ಅರ್ಜಿ ಹಾಕಲು ಅವಕಾಶವಿದೆ. ಅರ್ಜಿ ಭರಿಸದಿದ್ದರೆ ಅಥವಾ ನೀಡದಿದ್ದರೆ ಕಂತು ನಿಂದ ವಂಚಿತವಾಗಬೇಕಾಗುತ್ತದೆ ಎಂದರು. 

ಖಾಸಗೀಕರಣಕ್ಕೆ ವಿರೋಧ: ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾರ್ಖಾನೆ ಖಾಸಗೀಕರಣ ತಪ್ಪಿಸಲು ಕಳೆದ 10 ವರ್ಷದಿಂದ ಬಿಜೆಪಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. 2009-10 ರಿಂದ ವಿಐಎಸ್‍ಎಲ್‍ನಲ್ಲಿ ಪ್ರತಿ ವರ್ಷ 100 ಕೋಟಿ ರೂ ಹಣ ನಷ್ಟವಾಗುತ್ತಿದೆ. ಈ ಕಾರಣದಿಂದ ಕಾರ್ಖಾನೆ ಖಾಸಗೀಕರಣಕ್ಕೆ ಸರ್ಕಾರದ ಹಂತದಲ್ಲಿ ಚಿಂತನೆಯಿದೆ. ಆದರೆ ನಾನು ಕಾರ್ಖಾನೆಯ ಬಂಡವಾಳ ಹಿಂತೆಗೆಯದಂತೆ ನೋಡಿಕೊಂಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News