ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಶಿವಮೊಗ್ಗದಲ್ಲಿ ಎಬಿವಿಪಿ ಪ್ರತಿಭಟನೆ

Update: 2019-06-22 11:56 GMT

ಶಿವಮೊಗ್ಗ, ಜೂ. 22: ಬೆಳಗಾವಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜ್ ಎಂಜಿನಿಯರಿಂಗ್ ಪದವಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದನ್ನು ಖಂಡಿಸಿ ಶನಿವಾರ ಎಬಿವಿಪಿ ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. 

ವಿಟಿಯು ತಾಂತ್ರಿಕ ಮಹಾವಿದ್ಯಾಲಯವು ಒಂದಲ್ಲ ಒಂದು ಹಗರಣಗಳಲ್ಲಿ ಸಿಲುಕಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಬದಲು ಸಮಸ್ಯೆಗಳ ಸರಮಾಲೆಯಾಗಿ ಎದ್ದು ನಿಂತಿದೆ. ಈ ವಿವಿಯ ಭ್ರಷ್ಟಾಚಾರ, ಮೌಲ್ಯಮಾಪನ, ಪರೀಕ್ಷಾ ಗೊಂದಲಗಳು, ಅಂಕಪಟ್ಟಿ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳ ನಡುವೆ ನರಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಇದೆಲ್ಲದರ ನಡುವೆ ಇತ್ತೀಚೆಗೆ ಆರಂಭವಾದ ಎಂಜಿನಿಯರಿಂಗ್ ಪರೀಕ್ಷೆಯ ಪ್ರತಿಯೊಂದು ಪ್ರಶ್ನೆ ಪತ್ರಿಕೆಯು ಸೋರಿಕೆಯಗುತ್ತಿರುವುದು ವಿವಿಯ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಸುರಕ್ಷಿತವಾಗಿ ವಿದ್ಯಾರ್ಥಿಗಳಿಗೆ ತಲುಪಿಸಬೇಕಾದ ವಿವಿಯು, ಬೀದಿಯಲ್ಲಿ ಬಿಕರಿಯಾಗುವಂತಾಗಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ವಿವಿಯ ಪ್ರಶ್ನೆಪತ್ರಿಕೆಗಳು 10 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ವಿವಿಯೇ ಇಂತಹ ಹಗರಣಗಳಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ ವಿಷಯ. ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಮುಖಂಡರಾದ ಅರುಣ್‍ಕುಮಾರ್, ಸಚಿನ್, ಸುಭಾಷ್, ಪ್ರಜ್ವಲ್, ವಿವೇಕ್, ಪ್ರೇಮ್, ಸಂಜಯ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News