ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಮಹಾರಾಷ್ಟ್ರ ಸರಕಾರದ ಜೊತೆ ಚರ್ಚೆ: ಸಚಿವ ಡಿಕೆಶಿ

Update: 2019-06-22 16:30 GMT

ಬೆಳಗಾವಿ, ಜೂ.22: ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರದ ಜೊತೆ ಚರ್ಚೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರಾಜಾಪುರ ಬ್ಯಾರೇಜ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಎರಡೂ ರಾಜ್ಯಗಳ ಜನರಿಗೆ ಕುಡಿಯುವ ನೀರು ಮತ್ತು ರೈತರ ಹಿತರಕ್ಷಣೆಗೆ ಸರಕಾರ ಬದ್ಧವಿದೆ. ಇದೇ ದಿಸೆಯಲ್ಲಿ ಮಹಾರಾಷ್ಟ್ರ ಸರಕಾರದ ಜತೆ ಮಾತುಕತೆ ನಡೆಸಿ, ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಪ್ರತಿವರ್ಷ ಎರಡೂ ರಾಜ್ಯಗಳು ನೀರು ವಿನಿಮಯ ಮಾಡಿಕೊಳ್ಳುವ ಒಡಂಬಡಿಕೆಗೆ ನಮ್ಮ ಸರಕಾರದ ಸಹಮತವಿದೆ. ಆದರೆ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ಬಳಿಕವೇ ಒಡಂಬಡಿಕೆ ಮಾಡಿಕೊಳ್ಳಬಹುದು. ಹಣದ ಬದಲಾಗಿ ನಾಲ್ಕು ಟಿಎಂಸಿ ನೀರು ವಿನಿಮಯ ಪ್ರಸ್ತಾವ ಮಹಾರಾಷ್ಟ್ರ ಸರಕಾರ ಇಟ್ಟಿದೆ. ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಪರಿಶೀಲನೆ ನಡೆದಿದೆ ಎಂದು ಅವರು ತಿಳಿಸಿದರು.

ಒಡಂಬಡಿಕೆಗೆ ಕಾಲಾವಕಾಶ ಕೋರಿಕೆ: ನೀರು ವಿನಿಮಯ ಒಡಂಬಡಿಕೆಗಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ನಮ್ಮ ಮುಖ್ಯಮಂತ್ರಿ ಕಾಲಾವಕಾಶವನ್ನು ಕೇಳಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಸರಕಾರಗಳು ನೀರು ವಿನಿಮಯ ಒಡಂಬಡಿಕೆ ಮಾಡಿಕೊಳ್ಳುವ ಮುನ್ನ ಉಭಯ ರಾಜ್ಯಗಳ ನೀರಾವರಿ ಸಚಿವರು, ಈ ಬಗ್ಗೆ ವಿಸ್ತೃತವಾಗಿ ಮಾತುಕತೆ ನಡೆಸಿದ ಬಳಿಕವೇ ಒಡಂಬಡಿಕೆ ಮಾಡಿಕೊಳ್ಳೋಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ನೀರು ಬಿಡುಗಡೆ ಬಗ್ಗೆ ಶಿವಕುಮಾರ್ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಲಾಸ್ ಪಾಟೀಲ್, ಎರಡೂ ಸರಕಾರಗಳು ಪರಸ್ಪರ ಸಭೆ ನಡೆಸುವ ಮೂಲಕ ಉಭಯ ರಾಜ್ಯಗಳ ರೈತರ ಹಿತರಕ್ಷಿಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಲ್ಲೋಳ ಬ್ಯಾರೇಜ್ ಮತ್ತು ಮಾಂಜರಿ ಸೇತುವೆ ಕಮ್ ಬ್ಯಾರೇಜ್ ವೀಕ್ಷಿಸಿದ ಶಿವಕುಮಾರ್, ಪಂಪಸೆಟ್‌ಗಳ ಅಳವಡಿಕೆ ಬಗ್ಗೆ ಶಾಸಕರಿಂದಲೇ ಮಾಹಿತಿ ಪಡೆದುಕೊಂಡರು. ನದಿ ದಂಡೆಯಲ್ಲಿ ಅಳವಡಿಸಲಾಗಿರುವ ಮೋಟಾರ್‌ಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.

ಕುಡಿಯಲು ಬಿಡುವ ನೀರನ್ನು ಕೃಷಿಗೆ ಬಳಕೆ ಮಾಡಿಕೊಂಡರೆ ಏನು ಪ್ರಯೋಜನ ಎಂದು ಇದೇ ವೇಳೆ ಅಧಿಕಾರಿಗಳಿಗೆ ಶಿವಕುಮಾರ್ ಪ್ರಶ್ನಿಸಿದರು. ಮಾಂಜರಿ ಗ್ರಾಮದಲ್ಲಿ ಬಾವನ ಸವದತ್ತಿ ಹಾಗೂ ಮಾಂಜರಿ ಗ್ರಾಮದ ನಡುವೆ ನಿರ್ಮಿಸಲಾಗುತ್ತಿರುವ ಸೇತುವೆ ಕಮ್ ಬಾಂದಾರ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಳೆಗಾಲದಲ್ಲಿ ಹಳೆ ಸೇತುವೆ ಮುಳುಗಡೆಯಾಗುವುದರಿಂದ ಸ್ಥಳೀಯ ಜನರ ಒತ್ತಾಯದ ಮೇರೆಗೆ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ವಿಧಾನಸಭೆಯ ಮುಖ್ಯ ಸಚೇತ ಗಣೇಶ ಹುಕ್ಕೇರಿ ವಿವರಿಸಿದರು.

ಈ ವೇಳೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಶ್ರೀಮಂತ ಪಾಟೀಲ್, ಮಹೇಶ್ ಕುಮಠಳ್ಳಿ, ಶಾಸಕ ಮಹಾಂತೇಶ ಕೌಜಲಗಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ್ತಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News