ಮಲೆನಾಡಿನಲ್ಲಿ ಚುರುಕುಗೊಂಡ ಮುಂಗಾರು

Update: 2019-06-23 16:52 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜೂ. 23: ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ತಡವಾಗಿಯಾದರೂ ವರ್ಷಧಾರೆಯಾಗಲಾರಂಭಿಸಿರುವುದು, ಮಲೆನಾಡಿಗರಲ್ಲಿ ಹರ್ಷ ಮೂಡಿಸಿದೆ. 

ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಕಂಡುಬಂದಿದೆ. ಮುಂಗಾರು ಆರಂಭದ ಜೂನ್ ತಿಂಗಳು ಕೊನೆಗೊಳ್ಳಲು ಕೆಲ ದಿನಗಳಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿರಲಿಲ್ಲ. ಇದರಿಂದ ನದಿ, ಕೆರೆಕಟ್ಟೆಗಳಲ್ಲಿ ನೀರಿನ ಹರಿವು ಇಲ್ಲದಂತಾಗಿತ್ತು. ಜಲಾಶಯಗಳ ನೀರಿನ ಸಂಗ್ರಹದ ಮೇಲೆಯೂ ಪರಿಣಾಮ ಬೀರುವಂತಾಗಿತ್ತು. ಕೃಷಿ ಚಟುವಟಿಕೆ ಅಕ್ಷರಶಃ ಸ್ತಬ್ದಗೊಳ್ಳುವಂತಾಗಿತ್ತು. 

ಈ ನಡುವೆ ಶನಿವಾರದಿಂದ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಲಾರಂಭಿಸಿದೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ವರ್ಷಧಾರೆ ಮುಂದುವರಿದರೆ, ಕೃಷಿ ಚಟುವಟಿಕೆಗಳು ಬಿರುಸುಗೊಳ್ಳಲಿವೆ. ನದಿ, ಕೆರೆಕಟ್ಟೆಗಳಿಗೆ ನೀರು ಹರಿದು ಬರಲಿದೆ. 
ಶಿವಮೊಗ್ಗದಲ್ಲಿ ಶನಿವಾರ ತಡರಾತ್ರಿಯಿಂದ ಆರಂಭವಾಗಿರುವ ಜಿಟಿಜಿಟಿ ಮಳೆ ಭಾನುವಾರವೂ ಮುಂದುವರಿದಿತ್ತು. ಕಪ್ಪು ಮಳೆ ಮೋಡಗಳು ದಟ್ಟೈಸಿದೆ. ತಣ್ಣನೆ ವಾತಾವರಣ ಮನೆ ಮಾಡಿದ್ದು, ಇಷ್ಟು ದಿನ ಕಂಡುಬಂದಿದ್ದ ಗಾಳಿಯ ರಭಸ ಕಡಿಮೆಯಾಗಿದೆ. 

ವಿಳಂಬ: ಹಿಂಗಾರು ಮಳೆ ಕೈಕೊಟ್ಟಿದ್ದು ಹಾಗೂ ಮುಂಗಾರು ವಿಳಂಬದಿಂದ ಜಿಲ್ಲೆಯು ಭೀಕರ ಬರಗಾಲದತ್ತ ಮುಖ ಮಾಡುವಂತಾಗಿತ್ತು. ಮುಕ್ಕಾಲುಪಾಲು ಕೆರೆಕಟ್ಟೆ, ಜಲಾಶಯಗಳಲ್ಲಿ ನೀರು ಬರಿದಾಗಿತ್ತು. ಬೋರ್‍ವೆಲ್, ಬಾವಿಗಳಲ್ಲಿ ಅಂತರ್ಜಲ ಮಟ್ಟ ಗಂಭೀರ ಸ್ಥಿತಿಗೆ ಕುಸಿದಿತ್ತು. ಈ ಎಲ್ಲ ಕಾರಣಗಳಿಂದ ಜನ-ಜಾನುವಾರುಗಳ ಕುಡಿಯುವ ನೀರಿಗೆ ತತ್ವಾರ ಎದುರಾಗಿತ್ತು. ಹಾಗೆಯೇ ನೀರಿನ ಕೊರತೆಯಿಂದ ಜಮೀನು-ತೋಟಗಳಲ್ಲಿ ಬೆಳೆದಿದ್ದ ಫಸಲು ಒಣಗಲಾರಂಭಿಸಿತ್ತು. 

ಜೂನ್ 22 ಕಳೆದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿರಲಿಲ್ಲ. ಬಹುತೇಕ ಎಲ್ಲೆಡೆ ಹದ ಮಳೆಯಾಗದಿದ್ದರಿಂದ, ಹಲವೆಡೆ ರೈತರು ಇನ್ನಷ್ಟೆ ಕೃಷಿ ಕಾರ್ಯಗಳನ್ನು ಆರಂಭಿಸಬೇಕಾಗಿದೆ. ವಿಶೇಷವಾಗಿ ಭತ್ತ ಬೆಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿದೆ. 

'ಮಳೆಯಾಶ್ರಿತ ಪ್ರದೇಶಗಳಲ್ಲಿ ಇಷ್ಟರಲ್ಲಾಗಲೇ ರೈತರು ಭೂಮಿ ಉಳುಮೆ ಮಾಡಿ ಬತ್ತದ ಸಸಿಗಳನ್ನು ಮಡಿ ಮಾಡುತ್ತಿದ್ದರು. ಜೂನ್ ಅಂತ್ಯ, ಜುಲೈ ಆರಂಭದಲ್ಲಿ ಸಸಿಗಳ ನಾಟಿ ಮಾಡುತ್ತಿದ್ದರು. ಆದರೆ ಈ ಬಾರಿ ವರ್ಷಧಾರೆ ಕೈಕೊಟ್ಟ ಕಾರಣದಿಂದ ಹಲವೆಡೆ ಭತ್ತದ ಸಸಿಮಡಿ ಕಾರ್ಯ ಇಲ್ಲಿಯವರೆಗೂ ಆರಂಭವಾಗಿಲ್ಲ. ಈ ಕಾರಣದಿಂದ ಕೆಲ ರೈತರು ಭತ್ತದ ಬದಲಿಗೆ ಮೆಕ್ಕೆಜೊಳ ಬೆಳೆಯತ್ತ ಚಿತ್ತ ಹರಿಸುವ ಸಾಧ್ಯತೆಯೂ ಇದೆ' ಎಂದು ಕೃಷಿ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ. 

ಕಳೆದ ವರ್ಷ ಭರ್ತಿಯಾಗಿದ್ದ ತುಂಗಾ ಜಲಾಶಯ!
ಕಳೆದ ವರ್ಷ ಈ ವೇಳಗೆ, ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯವು ಸಂಪೂರ್ಣ ಗರಿಷ್ಠ ಮಟ್ಟ ತಲುಪಿತ್ತು. ಡ್ಯಾಂನ ಗರಿಷ್ಠ ಮಟ್ಟವಾದ 588.24 ಅಡಿ ಭರ್ತಿಯಾಗಿದ್ದ ಕಾರಣದಿಂದ ಡ್ಯಾಂನಿಂದ ಸಾವಿರಾರು ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿತ್ತು. ಆದರೆ ಪ್ರಸ್ತುತ ವರ್ಷ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿರುವುದರಿಂದ, ಡ್ಯಾಂ ಬರಿದಾಗುವ ಹಂತಕ್ಕೆ ಬಂದಿತ್ತು. ಇಲ್ಲಿಯವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದೀಗ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಡ್ಯಾಂನ ಒಳಹರಿವಿನಲ್ಲಿ ಏರಿಕೆ ಕಂಡುಬರುವ ಸಾಧ್ಯತೆಯಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News