ಕೊಹ್ಲಿಗೆ ದಂಡ, 1 ಡಿಮೆರಿಟ್ ಅಂಕ

Update: 2019-06-23 18:41 GMT

ಸೌತಾಂಪ್ಟನ್, ಜೂ.23: ಅಪಘಾನಿಸ್ತಾನದ ಎದುರು ಶನಿವಾರ ನಡೆದ ಪಂದ್ಯದಲ್ಲಿ ಅಂಪೈರ್ ಜೊತೆ ಅತಿರೇಕದ ವರ್ತನೆ ತೋರಿದ್ದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಪಂದ್ಯಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಕೊಹ್ಲಿಯ ಶಿಸ್ತು ದಾಖಲೆಯಲ್ಲಿ ಒಂದು ಡಿಮೆರಿಟ್ ಅಂಕವನ್ನು ಸೇರಿಸಲಾಗಿದೆ. ಕೊಹ್ಲಿಯ ಖಾತೆಗೆ ಸೇರ್ಪಡೆಯಾಗಿರುವ ಎರಡನೇ ಡಿಮೆರಿಟ್ ಅಂಕ ಇದಾಗಿದೆ. 2018ರ ಜನವರಿ 15ರಂದು ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಅತಿರೇಕದ ವರ್ತನೆ ತೋರಿದ್ದಕ್ಕಾಗಿ ಕೊಹ್ಲಿ ಹೆಸರಿಗೆ ಒಂದು ಡಿಮೆರಿಟ್ ಅಂಕ ಸೇರಿಸಲಾಗಿತ್ತು.

 ಶನಿವಾರ ಅಫ್ಘಾನಿಸ್ತಾನದ ಎದುರಿನ ಪಂದ್ಯದಲ್ಲಿ ಎಲ್‌ಬಿಡಬ್ಲೂ ತೀರ್ಪಿನ ಸಂದರ್ಭ ಅಂಪೈರ್ ಅಲೀಮ್ ದಾರ್‌ರೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ, ಅಂಪೈರ್ ಬಳಿ ಆಕ್ರಮಣಶೀಲ ರೀತಿಯಲ್ಲಿ ವರ್ತಿಸಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಐಸಿಸಿ, ಕೊಹ್ಲಿ ಐಸಿಸಿ ನೀತಿ ಸಂಹಿತೆಯ ಒಂದನೇ ಹಂತವನ್ನು ಉಲ್ಲಂಘಿಸಿದ್ದಾರೆ ಎಂದು ತೀರ್ಮಾನಿಸಿದೆ. ಅಲ್ಲದೆ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಮಿತಿಮೀರಿ ಅಪೀಲು ಮಾಡುವ ಮೂಲಕ ಐಸಿಸಿ ನೀತಿಸಂಹಿತೆಯ 2.1 ಪರಿಚ್ಛೇದವನ್ನು ಉಲ್ಲಂಘಿಸಿದ್ದಾರೆ ಎಂದೂ ತೀರ್ಮಾನಿಸಿದೆ.

ಮೈದಾನದ ಅಂಪೈರ್‌ಗಳಾದ ಅಲೀಮ್ ದಾರ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್, ತೃತೀಯ ಅಂಪೈರ್ ರಿಚರ್ಡ್ ಕೆಟಲ್‌ಬೊರೊ, ಚತುರ್ಥ ಅಂಪೈರ್ ಮೈಕೆಲ್ ಗಾಫ್ ಭಾರತದ ನಾಯಕನ ವಿರುದ್ಧ ದೂರು ನೀಡಿದ್ದರು. ಕೊಹ್ಲಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಹಾಗೂ ಐಸಿಸಿ ಎಲೈಟ್ ಮ್ಯಾಚ್ ರೆಫ್ರಿಗಳ ಸಮಿತಿ ವಿಧಿಸಿದ್ದ ಶಿಕ್ಷೆಯನ್ನೂ ಸ್ವೀಕರಿಸಿರುವ ಕಾರಣ ಈ ಪ್ರಕರಣದ ಬಗ್ಗೆ ಯಾವುದೇ ವಿಚಾರಣೆಯ ಅಗತ್ಯವಿರುವುದಿಲ್ಲ ಎಂದು ಐಸಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News